ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ಸಹಾಯಕನನ್ನು ಇಡಿ ಬಂಧಿಸಿದೆ.
ಬೆಂಗಳೂರು ಮತ್ತು ಬಳ್ಳಾರಿಯ ಲ್ಲಿ ಇಡಿ ಬೆಳಗ್ಗೆ ಇದ್ದಕ್ಕಿದ್ದಂತೆ ದಾಳಿ ನಡೆಸಿತ್ತು. ದಾಳಿ ವೇಳೆ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿರುವ ಇಡಿ ಅಧಿಕಾರಿಗಳು ಹೆಚ್ವಿನ ವಿಚಾರಣೆಗಾಗಿ ನಾಗೇಂದ್ರ ಪಿಎ ಹರೀಶ್ ಎಂಬಾತನನ್ನು ಬಂಧಿಸಿದೆ.
ನಿಗಮದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಆಂಧ್ರಪ್ರದೇಶ, ತೆಲಂಗಾಣದ ಕೆಲವು ಸಂಸ್ಥೆಗಳಿಗೆ ವರ್ಗಾವಣೆ ಮಾಡಿರುವುದು ಸೇರಿದಂತೆ ವಿವಿಧ ದಾಖಲೆಗಳು ಪಿಎ ಹರೀಶ್ ಬಳಿಯಿವೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಆತನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರು.ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ರಾಜೀನಾಮೆ ಪಡೆಯಲಾಗಿದೆ. ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಹಣ ವರ್ಗಾವಣೆ ಕುರಿತು ಸಿಬಿಐ ಕೂಡ ದೂರು ದಾಖಲಿಸಿಕೊಂಡಿದೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಕಾರಣದಿಂದ ಇಡಿ ಅಖಾಡಕ್ಕಿಳಿದಿದ್ದು, ಸರಕಾರಕ್ಕೆ ಸಂಕಷ್ಟ ತಂದೊಡ್ಡಿದೆ.
