ರಾಜಕೀಯ ಸುದ್ದಿ

ಪರಿಷತ್ತಿಗೆ ನನ್ನನ್ನು ಆರಿಸಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇನೆ

Share It

ಆನೇಕಲ್. ; ಪದವೀಧರರಿಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ನಾನು ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ ಎಂದು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್ ಎಸ್ ಉದಯ ಸಿಂಗ್ ಹೇಳಿದರು.

ಆನೇಕಲ್ ಪಟ್ಟಣದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ಮತಯಾಚನೆ ಮಾಡಿ ಮಾತನಾಡಿ, ಹಲವಾರು ವರ್ಷಗಳಿಂದ ಪದವೀಧರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕಾಂಗ್ರೆಸ್ ಹಾಗೂ ಬಿಜೆಪಿ ಮುತುವರ್ಜಿ ವಹಿಸಿಲ್ಲ, ಪದವೀಧರ ಸಮೂಹದ ಸಮಸ್ಯೆ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಅವರ ಹಿತರಕ್ಷಣೆಗಾಗಿ ಒಬ್ಬ ಪ್ರತಿನಿಧಿ ಇರಲಿ ಎಂಬ ಕಾರಣಕ್ಕಾಗಿ ವಿಧಾನಪರಿಷತ್ ಪದವೀಧರರ ಮತಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಇದಕ್ಕೆ ಎಲ್ಲಾ ಪದವೀಧರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕೆ.ಪಿ.ಎಸ್.ಸಿನಲ್ಲಿ ಹಲವಾರು ವರ್ಷಗಳಿಂದ ಹಗರಣಗಳ ಸರಮಾಲೆ ನಡೆಯುತ್ತಿದೆ. ಆದರೆ ಇದನ್ನು ಗೆದ್ದು ಹೋದಂತಹ ಯಾವುದೇ ಅಭ್ಯರ್ಥಿಗಳು ಪ್ರಶ್ನೆ ಮಾಡುವಂತಹ ಕೆಲಸ ಮಾಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ ಸೇವಾ ಕಾರ್ಯ ಮೂಲಕ ಸಾಮಾಜಿಕ ಕಳಕಳಿ ಹಾಗೂ ಜನರ ನಡುವೆ ಬೆಳೆದಿದ್ದು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧನಿಯೆತ್ತಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪದವೀಧರರು ಎಂದರೆ ಅವರು ಪ್ರತಿಭಾನ್ವಿತರು ಎಂದು ಅರ್ಥ ಆದರೆ ಇಂತಹ ಪದವೀಧರರಿಗೆ ಆಮಿಷಗಳನ್ನು ಒಡ್ಡುವ ಕೆಲಸವನ್ನು ಕೆಲವು ಪಕ್ಷದ ಅಭ್ಯರ್ಥಿಗಳು ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಪದವೀಧರರಿಗೆ ಹಂಚಲು ತಂದಿದ್ದಾರೆ ಎನ್ನಲಾದ ಗಿಫ್ಟುಗಳನ್ನು ಈಗಾಗಲೇ ಕೋರಿಯರ್ ಕಚೇರಿಯಲ್ಲಿಯೇ ವಶಕ್ಕೆ ಪಡೆಯಲಾಗಿದ್ದು ಇಂತಹ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಹೇಳಿದರು.

ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಜಿ. ಮುನಿರಾಜು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಉದಯ ಸಿಂಗ್ ಅವರನ್ನು ಹತ್ತಿರದಿಂದ ನಾನು ನೋಡಿದ್ದೇನೆ. ಇಂತಹ ವ್ಯಕ್ತಿಗಳಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಆಗಿದ್ದು ಪದವೀಧರ ಪರವಾಗಿ ನಿಂತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಸರ್ಕಾರ ಯಾವುದೇ ಇರಲಿ ಲೋಪ ಆದಾಗ ಅದನ್ನು ಎತ್ತಿ ತೋರಿಸಿ ಪದವಿದರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಉದಯ ಸಿಂಗ್ ಮಾಡಲು ಸಮರ್ಥರಿದ್ದು ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಮತ ಹಾಕಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ದೈಹಿಕ ಶಿಕ್ಷಕರಾದ ಅಶ್ವತಪ್ಪ, ರಾಜಪ್ಪ ಮತ್ತಿತರರು ಹಾಜರಿದ್ದರು.


Share It

You cannot copy content of this page