ಇಂಗ್ಲೆಂಡ್ ರಾಜಧಾನಿ ಲಂಡನ್ ನಗರದ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಭಾರತ ನಡುವಿನ ನಿರ್ಣಾಯಕ 5ನೇ ಕ್ರಿಕೆಟ್ ಟೆಸ್ಟ್ ಪಂದ್ಯ ಆರಂಭವಾಗಿದೆ.
ಮೊದಲ 4 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಮೊದಲ ಮತ್ತು 3ನೇ ಟೆಸ್ಟ್ ಗೆದ್ದು ಬೀಗಿದೆ. ಭಾರತ ಸಹ 2ನೇ ಟೆಸ್ಟ್ ಪಂದ್ಯ ಗೆದ್ದು, 4ನೇ ಟೆಸ್ಟ್ ನಲ್ಲಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದೆ. ಹೀಗಾಗಿ ಕೊನೆಯ ಹಾಗೂ ನಿರ್ಣಾಯಕ ಎನಿಸಿರುವ ಓವಲ್ ಸ್ಟೇಡಿಯಂನ 5ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ಎರಡೂ ತಂಡಗಳು ಪೈಪೋಟಿ ನಡೆಸುತ್ತಿವೆ. ಓವಲ್ ಟೆಸ್ಟ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಇಬ್ಬರು ಓಪನರ್ ಗಳಾದ ಯಶಸ್ವಿ ಜೈಸ್ವಾಲ್ (2 ರನ್) ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ (14 ರನ್) ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದೆ.
ಆದಾಗ್ಯೂ ನಿರ್ಣಾಯಕ 5ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್‌ಮನ್ ಕರುಣ್ ನಾಯರ್ ಮತ್ತೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಜೊತೆಗೆ ಮುಂಚೂಣಿ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರೂ ಕೂಡ ಟೀಂ ಇಂಡಿಯಾ ಸೇರಿದ್ದಾರೆ. ಆದಾಗ್ಯೂ ಕನ್ನಡಿಗ ಓಪನರ್ ಕೆ.ಎಲ್ ರಾಹುಲ್ ಮೊದಲ ಇನಿಂಗ್ಸ್ ಆರಂಭದಲ್ಲೇ 14 ರನ್ ಗಳಿಸಿ ಬೇಗನೇ ಔಟಾಗಿರುವುದು ಟೀಂ ಇಂಡಿಯಾಕ್ಕೆ ನಿರಾಸೆ ತಂದಿದೆ.
ಇದೀಗ ಸಾಯಿ ಸುದರ್ಶನ್ (ಅಜೇಯ 14 ರನ್ ಹಾಗೂ ನಾಯಕ ಶುಭಮಾನ್ ಗಿಲ್ (ಅಜೇಯ 6 ರನ್) ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇತ್ತೀಚಿನ ವರದಿ ಬಂದಾಗ ಭಾರತ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ. ಇಂಗ್ಲೆಂಡ್ ನ ವೇಗದ ಬೌಲರ್ ಗಳಾದ ಅಟ್ಕಿನ್ಸನ್ ಹಾಗೂ ಕ್ರಿಕ್ಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾಕ್ಕೆ ಆತಂಕ ಸೃಷ್ಟಿಸಿದ್ದಾರೆ.
ಓವಲ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಗೆ ಅನುಕೂಲವಾಗಿದೆ. ಓವಲ್ ಪಿಚ್ ನಲ್ಲಿ ಹೆಚ್ಚಿನ ಸ್ಕೋರ್ ಗಳಿಸಲು ಸಾಧ್ಯವಿದೆ. ಆದರೆ ಮೊದಲ ಇನಿಂಗ್ಸ್ ಆರಂಭದಲ್ಲೇ ಟೀಂ ಇಂಡಿಯಾ ಇಬ್ಬರೂ ಓಪನರ್ ಗಳನ್ನು ಕಳೆದುಕೊಂಡು ಹಿನ್ನಡೆ ಕಂಡಿದೆ.