ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ ಸೂಪರ್-8: ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

Share It

2024 ನೇ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನ ಸೂಪರ್-8 ರ ಗ್ರೂಪ್-2 ರ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ.

ವೆಸ್ಟ್ ಇಂಡೀಸ್ ದೇಶದ ಸೇಂಟ್ ಲೂಸಿಯಾದ ಡಾರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಜಾನ್ಸನ್ ಚಾರ್ಲ್ಸ್ ಹಾಗೂ ಬ್ರಾಂಡನ್ ಕಿಂಗ್ ಉತ್ತಮ ಆರಂಭ ಒದಗಿಸಿದರು.

ಇವರಿಬ್ಬರೂ ಮೊದಲ ವಿಕೆಟ್​ಗೆ 94 ರನ್ ಪೇರಿಸಿದ ಬಳಿಕ ಚಾಲ್ಸ್​ (38 ರನ್) ವಿಕೆಟ್ ಒಪ್ಪಿಸಿದರು. ಇನ್ನು 23 ರನ್​ಗಳಿಸಿದ್ದ ಬ್ರಾಂಡನ್ ಕಿಂಗ್ ಗಾಯಗೊಂಡು ಮೈದಾನ ತೊರೆದರು. ಆರಂಭಿಕರಿಬ್ಬರ ನಿರ್ಗಮನದ ನಂತರ ವಿಂಡೀಸ್ ರನ್ ಗತಿಯು ಕುಸಿದತ್ತ ಸಾಗಿತು.

ಇಷ್ಟಾದರೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (36 ರನ್) ಹಾಗೂ ರೋವ್​ಮನ್ ಪೊವೆಲ್ (36 ರನ್) ಉಪಯುಕ್ತ ಕಾಣಿಕೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 180 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು

181 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಓಪನರ್ ಗಳಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಸಿಡಿಲಬ್ಬರದ ಆರಂಭ ಒದಗಿಸಿದರು. ಪವರ್​ ಪ್ಲೇನಲ್ಲಿ 58 ರನ್ ಕಲೆಹಾಕಿದ ಈ ಓಪನರ್ ಗಳು ಸವಾಲಿನ ಮೊತ್ತವನ್ನು ಚೇಸ್ ಮಾಡಲು ಅತ್ಯುತ್ತಮ ಅಡಿಪಾಯ ಹಾಕಿದರು.

ಈ ಹಂತದಲ್ಲಿ 25 ರನ್​ ಗಳಿಸಿದ್ದ ಜೋಸ್ ಬಟ್ಲರ್ ಎಲ್.ಬಿ.ಡಬ್ಲ್ಯೂ ಆಗಿ ಔಟಾದರು. ಇದರ ಬೆನ್ನಲ್ಲೇ ಮೊಯೀನ್ ಅಲಿ (13 ರನ್) ಕೂಡ ಔಟಾದರು. ಇಷ್ಟಾದರೂ ಮತ್ತೊಂದೆಡೆ ಔಟಾಗದೇ ಉಳಿದಿದ್ದ ಓಪನರ್ ಫಿಲ್ ಸಾಲ್ಟ್ ಅಬ್ಬರ ಬ್ಯಾಟಿಂಗ್ ಮುಂದುವರೆದಿತ್ತು. ವಿಂಡೀಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳನ್ನು ಬಾರಿಸಿದರು. ಅಲ್ಲದೆ ಅಜೇಯ 87 ರನ್ ಸಿಡಿಸಿದರು.

ಮತ್ತೊಂದೆಡೆ ಜಾನಿ ಬೈರ್​ಸ್ಟೋವ್ 26 ಎಸೆತಗಳಲ್ಲಿ 48 ರನ್​ಗಳನ್ನು ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು 17.3 ಓವರ್​ಗಳಲ್ಲಿ ಗುರಿ ತಲುಪಿ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.
ಮುಂದೆ ದಕ್ಷಿಣ ಆಫ್ರಿಕಾಕ್ಕೆ ಸೋತರೂ ಹೊಸ ತಂಡ ಅಮೆರಿಕಾ ತಂಡವನ್ನು ಸೋಲಿಸಿದರೆ ಸಾಕು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಲಿದೆ.


Share It

You cannot copy content of this page