ಉಪಯುಕ್ತ ರಾಜಕೀಯ ಸುದ್ದಿ

ಹಾಸನ,ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ರೈತರಿಗೆ ಖುಷಿ ಸುದ್ದಿ: 2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ

Share It

ಬೆಂಗಳೂರು: ಎತ್ತಿನಹೊಳೆ ನೀರನ್ನು 2027ರ ಅಂತ್ಯದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಏತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲು ಈ ಮೂರು ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ನೀಡುವುದೇ ಮುಖ್ಯ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಲಾಯಿತು.

ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಎಂಸಿ ಸುಧಾಕರ್ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ, “2027ರಲ್ಲಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರು ಹರಿಯುವುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಲಾಯಿತು.

ಸಚಿವರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ರಾಜೇಶ್ ಅಮ್ಮಿನಭಾವಿ ಹಾಗೂ 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓಗಳು, ಎಸ್ಎಲ್ಓ ಗಳು ಉಪಸ್ಥಿತರಿದ್ದು ಸಂಬಂಧಿತ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡಲಾಗಿದೆ.

ಪ್ರಮುಖವಾಗಿ ಎತ್ತಿನಹೊಳೆ ನೀರು ತುಮಕೂರು ಜಿಲ್ಲೆಯ ಗಡಿಯವರೆಗೆ ತರಲು ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ದೊಡ್ಡಬಳ್ಳಾಪುರದಿಂದ ಕುಂದಾಣ ಮಾರ್ಗವಾಗಿ ಒಂದು ಪೈಪ್‌ ಲೈನ್ ಕೋಲಾರ ಹಾಗೂ ಬಂಗಾರಪೇಟೆ ಕಡೆಗೆ, ಮತ್ತೊಂದು ಪೈಪ್‌ ಲೈನ್ ಚಿಂತಾಮಣಿ ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಿಲು ಕಡೆಗೆ ಅಳವಡಿಸಲು ಕೂಡಲೇ ಕಾಮಗಾರಿ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು. ಈ ಪೈಪ್‌ ಲೈನ್‌ಗಳು ಒಟ್ಟು 261.90 ಕಿ.ಮೀ. ದೂರು ಅಳವಡಿಸಬೇಕಿದೆ. ಪೈಪ್‌ ಲೈನ್ ಅಳವಡಿಸಲು ಅಗತ್ಯವಿರುವ ಭೂ ಸ್ವಾಧೀನವನ್ನು ಕೂಡಲೇ ಮಾಡಲು ಭೂ ಸ್ವಾಧೀನ ಅಧಿಕಾರಿಗಳಿಗೆ ಸೂಚಿಸಲಾಯಿತು. ಭೂ ಸ್ವಾಧೀನ ಆದೇಶ ಹೊರಡಿಸಿದ ಭಾಗದಲ್ಲಿ ಪೈಪ್‌ ಲೈನ್ ಅಳವಡಿಕೆಯನ್ನು ಕೂಡಲೇ ಆರಂಭಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಮುಂದುವರೆದು, ಕುಡಿಯುವ ನೀರು ಒದಗಿಸಬೇಕಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀರು ಶುದ್ದೀಕರಣ ಘಟಕ ಹಾಗೂ ಗ್ರಾಮಗಳಿಗೆ ನೀರು ತಲುಪಿಸುವ ಪೈಪ್‌ ಲೈನ್ಗಳನ್ನು ಅಳವಡಿಸಲು ಅಂದಾಜು ಪಟ್ಟಿ ಹಾಗೂ ಪ್ರಸ್ತಾವನೆಗಳನ್ನು ಕೂಡಲೇ ತಯಾರಿಸಿ ಅನುಮೋದನೆಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟಾರೆ 2027ರ ಅಂತ್ಯಕ್ಕೆ ನೀರನ್ನು ಈ ಮೂರೂ ಜಿಲ್ಲೆಗಳಿಗೆ ತಲುಪಿಸಲು ಮತ್ತು ನೀರನ್ನು ಶುದ್ದೀಕರಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಮತ್ತು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಯಿತು.


Share It

You cannot copy content of this page