ನವದೆಹಲಿ : ದೆಹಲಿ ಮದ್ಯ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯದ ಜಾಮೀನಿಂದ ನಿರಾಳವಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ಶಾಕ್ ನೀಡಿದೆ. ಸ್ಥಳೀಯ ನ್ಯಾಯಾಲಯ ನೀಡಿದ ಜಾಮೀನಿಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಕೇಂದ್ರ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಜಾಮೀನನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಕೂಡಲೇ ಹೈಕೋರ್ಟ್ನಿಂದ ವಿಚಾರಣೆ ನಡೆಸಬೇಕು ಎಂದು ಇಡಿ ಆಗ್ರಹಿಸಿತ್ತು. ಇಡಿ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದೆ. ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಮಾರ್ಚ್ 21 ರಂದು ಬಂಧಿಸಿತ್ತು.
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 10 ರಂದು ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಜೂ. 2 ರಂದು ಅವರು ಸುಪ್ರೀಂಕೋರ್ಟ್ಗೆ ಶರಣಾಗಿದ್ದರು. ಶರಣಾಗುವ ಮುನ್ನ ಅರವಿಂದ್ ಕೇಜ್ರಿವಾಲ್ ಒಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೇಜ್ರಿವಾಲ್ ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳ ಕಾಲ ವಿಸ್ತರಿಸುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಕೇಜ್ರಿವಾಲ್ ಮನವಿ ತಿರಸ್ಕರಿಸಿತ್ತು.
ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇ.ಡಿ. ಮಾರ್ಚ್ 21 ರಂದು ಬಂಧಿಸಿತ್ತು. ಇದಕ್ಕೂ ಮುನ್ನ 9 ಬಾರಿ ಸಮನ್ಸ್ ನೀಡಿದ್ದರೂ ಅವರು ತನಿಖಾ ಸಂಸ್ಥೆ ಮುಂದೆ ಹಾಜರಾಗಿರಲಿಲ್ಲ. ಇದಾದ ಬಳಿಕ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ 22 ರಂದು ಬಂಧಿತ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಏಪ್ರಿಲ್ 1 ರಂದು ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು.
