ದಾವಣಗೆರೆ: ಮದುವೆಯಾಗಿ ಎರಡು ತಿಂಗಳು ಪೂರೈಸುವ ಮೊದಲೇ ಸಂಸಾರದಲ್ಲಿ ಉಂಟಾದ ಗಂಭೀರ ಕಲಹದ ಪರಿಣಾಮವಾಗಿ ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದ ಸಂಬಂಧಿಯೂ ಆತ್ಮಹತ್ಯೆಗೆ ಶರಣಾಗಿರುವುದು ಗ್ರಾಮದಲ್ಲಿ ಆಘಾತ ಮೂಡಿಸಿದೆ.
ಗುಮ್ಮನೂರು ಗ್ರಾಮದ ಹರೀಶ್ (32) ಎಂಬ ಯುವಕ ಮೃತಪಟ್ಟವರು. ಖಾಸಗಿ ಕಂಪನಿಯಲ್ಲಿ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರಿಗೆ ಸುಮಾರು ಎರಡು ತಿಂಗಳ ಹಿಂದೆ ಸರಸ್ವತಿ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪತ್ನಿ ಮನೆ ಬಿಟ್ಟು ತೆರಳಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಹರೀಶ್, ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಾವಿಗೆ ಪತ್ನಿ, ಆಕೆಯ ಕುಟುಂಬದ ಸದಸ್ಯರು ಹಾಗೂ ಇನ್ನೊಬ್ಬ ಯುವಕ ಕಾರಣವೆಂದು ಉಲ್ಲೇಖಿಸಿದ್ದಾರೆ. ಪತ್ನಿ ಮನೆ ಬಿಟ್ಟ ಬಳಿಕ ತನ್ನ ಮೇಲೆ ಸುಳ್ಳು ಆರೋಪಗಳು ಹಾಗೂ ಪ್ರಾಣ ಬೆದರಿಕೆಗಳು ಬಂದಿದ್ದವು ಎಂದು ಡೆತ್ ನೋಟ್ನಲ್ಲಿ ತಿಳಿಸಿದ್ದಾರೆ. ಜೊತೆಗೆ, ತನ್ನ ಅಂತ್ಯಸಂಸ್ಕಾರವನ್ನು ಬಸವಧರ್ಮದ ವಿಧಿವಿಧಾನಗಳ ಪ್ರಕಾರ ನೆರವೇರಿಸಬೇಕೆಂದು ಮನವಿ ಮಾಡಿದ್ದಾರೆ.
ಹರೀಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಈ ಮದುವೆಗೆ ಪ್ರಮುಖವಾಗಿ ಮುಂದಾಗಿದ್ದ ಸರಸ್ವತಿಯ ಸೋದರಮಾವ ರುದ್ರೇಶ್ (40) ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆನೆಕೊಂಡದ ತಮ್ಮ ನಿವಾಸದಲ್ಲಿ ವಿಷ ಸೇವಿಸಿದ್ದ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸಂಬಂಧ ಬೆಳೆಸುವ ಉದ್ದೇಶದಿಂದ ಮಾಡಿದ ಪ್ರಯತ್ನವೇ ಇಂತಹ ದುರ್ಘಟನೆಯಾಗಿ ಪರಿಣಮಿಸಿದ್ದಕ್ಕೆ ಅವರು ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ದಾವಣಗೆರೆ ಗ್ರಾಮಾಂತರ ಹಾಗೂ ಆರ್ಎಂಸಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಒಂದೇ ಘಟನೆಯಿಂದ ಎರಡು ಜೀವಗಳು ಕಳೆದುಹೋಗಿರುವುದು ಗುಮ್ಮನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

