ಮಡಿಕೇರಿ: ಕೇರಳದ ವಯನಾಡಿನ ದುರಂತದ ನಡುವೆ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ, ಅಗತ್ಯ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಗುಡ್ಡ ಕುಸಿತದ ಕುರಿತು ಕೊಡಗು ಜಿಲ್ಲಾಡಳಿತ ಸಮೀಕ್ಷೆ ನಡೆಸಿದ್ದು, ಭೂಕುಸಿತದ ಸಾಧ್ಯತೆ ಇರುವ 104 ಪ್ರದೇಶಗಳನ್ನು ಗುರುತಿಸಿದೆ. ಭಾರತೀಯ ಭೂಗರ್ಭ ಇಲಾಖೆ ಸಲ್ಲಿಸಿದ ವರದಿ ಆಧರಿಸಿ ಈ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ತಿಂಗಳು ಭಾರೀ ಮಳೆಯಾಗುವ ನಿರೀಕ್ಷೆ ಕಾರಣ ಜಿಲ್ಲಾಡಳಿತ ಸಂಭಾವ್ಯ ಭೂ ಕುಸಿತದ ಪ್ರದೇಶದಲ್ಲಿ ನೆಲೆಸಿರುವ ಕುಟುಂಬಗಳ ರಕ್ಷಣೆಗೆ ಮುಂದಾಗಿದೆ.
ಜಿಲ್ಲಾಡಳಿ ಗುರುತಿಸಿರುವ 104 ಸ್ಥಳಗಳಲ್ಲಿ 2,995 ಕುಟುಂಬಗಳು ವಾಸ ಮಾಡುತ್ತಿವೆ. ಈ ಎಲ್ಲ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಜಿಲ್ಲಾಡಳಿತದಿಂದ ನೋಟಿಸ್ ನೀಡಲಾಗಿದೆ. ಈ ಹಿಂದಿನ ವಿಪತ್ತು ವರದಿ ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶ ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಶೀಘ್ರವೇ ಇಲ್ಲಿನ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಸಜ್ಜಾಗಿದ್ದು, 14 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ 200 ಕ್ಕೂ ಹೆಚ್ಚು ನಿವಾಸಿಗಳು ಆಶ್ರಯ ಪಡೆದಿದ್ದಾರೆ. ಅಲ್ಲದೆ, ವಿಪತ್ತಿನ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ 95 ಪರಿಹಾರ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ.
ರಾಜ್ಯದಲ್ಲಿ 1,351 ಸ್ಥಳಗಳು ಅಪಾಯದಲ್ಲಿ: ರಾಜ್ಯದಲ್ಲಿ 1351 ಸ್ಥಳಗಳಲ್ಲಿ ಗುಡ್ಡ ಕುಸಿಯುವ ಭೀತಿಯಿದೆ ಎಂದು ಹೇಳಲಾಗುತ್ತಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಸ್ಥಳಗಳನ್ನು ಗುರುತಿಸಲಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

