ಕೆಆರ್ ಪುರ : ಸರ್ಕಾರ ರಚನೆಯಾಗಿ ವರ್ಷ ಕಳೆದರೂ ಅನುದಾನ ನೀಡದೆ ಸತಾಯಿಸುತ್ತಿರುವ ,ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು .
ಕ್ಷೇತ್ರದ ವಿಜಿನಾಪುರದಲ್ಲಿ ಶ್ರೀ ಭುವನೇಶ್ವರ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು,
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಒಂದು ವರ್ಷಕ್ಕೂ ಹೆಚ್ಚು ದಿನಗಳು ಕಳೆದಿದೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಬೇಜವಾಬ್ದಾರಿತನವನ್ನು ಮೆರೆಯುತ್ತಿದೆ, ಜೊತೆಗೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ನೀಡುತ್ತಿಲ್ಲ ರಸ್ತೆಗಳೆಲ್ಲಾ ಗುಂಡಿಗಳಿಂದ ಕೂಡಿವೆ.
ಜನಸಾಮಾನ್ಯರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಜೊತೆಗೆ ದಿನ ಬಳಕೆಯ ಹಾಲು ಹಾಗೂ ಅಡುಗೆ ಅನಿಲ,ಪೆಟ್ರೋಲ್,ಡೀಸಲ್ ಬೆಲೆಗಳನ್ನು ಏರಿಕೆ ಮಾಡಿದ್ದಾರೆ ಇವರ ಈ ಜನ ವಿರೋಧಿ ನೀತಿಗಳಿಗೆ ಮುಂದಿನ ಅಧಿವೇಶನದಲ್ಲಿ ಹೋರಾಟದ ಮುಖಾಂತರ ತಕ್ಕ ಉತ್ತರ ನೀಡಲಿದ್ದೇವೆ ಎಂದರು .
ಇನ್ನು ನಾಡಪ್ರಭು ಕೆಂಪೇಗೌಡರ ಸಂಕಲ್ಪ ಇಂದು ಬೆಂಗಳೂರು ಮಹಾನಗರಿಯಾಗಿ ಬದಲಾಗಿದ್ದು, ಜಾತಿ ಜನಾಂಗವನ್ನು ಮರೆತು ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಅವರನ್ನು ಸ್ಮರಿಸಿ ಆರಾಧಿಸುವ ಕೆಲಸ ಮಾಡಬೇಕು, ಜೊತೆಗೆ ಮುಂಬರುವ ಶನಿವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಉಪಸ್ಥಿತಿಯಲ್ಲಿ ಕೆಆರ್ ಪುರದಲ್ಲಿ ಕೆಂಪೇಗೌಡರ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ ಎಂದರು.
ಆಯೋಜಕರಾದ ಜೈಭುವನೇಶ್ವರಿ ಒಕ್ಕಲಿಗ ಸಂಘದ ಅಧ್ಯಕ್ಷ ಪ್ರದೀಪ್ ಗೌಡ, ಉಪಾಧ್ಯಕ್ಷ ರಮೇಶ್ ಗೌಡ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಮುನೇಗೌಡ ,ಎಸ್ ಎಲ್. ವಿ.ಶೇಖರ್, ರಾಜ್ ಕುಮಾರ್ ಮಲ್ಲಣ್ಣ , ಗೋಪಾಲಣ್ಣ, ಜಿಮ್ ರಮೇಶ್ ಮತ್ತಿತರರಿದ್ದರು.