ಬೆಂಗಳೂರು: ಲೊಕೇಶನ್ ವಿಚಾರವಾಗಿ ಗಲಾಟೆ ನಡೆದು ಇ-ಕಾಮರ್ಸ್ ಕಂಪನಿಯೊಂದರ ಡೆಲಿವರಿ ಪ್ರತಿನಿಧಿ, ಗ್ರಾಹಕನ ಮೇಲೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ಮಾ. 7ರಂದು ನಡೆದಿದೆ.
ಕೋರಮಂಗಲ ಠಾಣಾ ವ್ಯಾಪ್ತಿಯ ಅಂಗಾಳಮ್ಮ ಲೇಔಟ್‌ನಲ್ಲಿ 27 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಮೇಲೆ ಡೆಲಿವರಿ ಏಜೆಂಟ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗ್ರಾಹಕನ ಮೂಗಿನ ಮೂಳೆ ಮುರಿದಿದೆ. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲದ 8ನೇ ಬ್ಲಾಕ್ ನಿವಾಸಿ ದೂರುದಾರ ಕೇರಳ ಮೂಲದವರಾಗಿದ್ದು, ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡಿದ್ದರು. ವಿತರಣಾ ಏಜೆಂಟ್ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಎರಡನೇ ಮಹಡಿ ಫ್ಯ್ಲಾಟ್ಗೆ ಹೋಗುವ ಬದಲು, ವಿತರಣಾ ಏಜೆಂಟ್ ನಾಲ್ಕನೇ ಮಹಡಿಗೆ ಹೋಗಿದ್ದಾರೆ.
ಬಳಿಕ ಗ್ರಾಹಕ ಕರೆ ಮಾಡಿ, ಸರಿಯಾದ ಮಹಡಿಗೆ ಬರಲು ಕೇಳಿದಾಗ, ವಿತರಣಾ ಏಜೆಂಟ್ ಫ್ಯ್ಲಾಟ್ ಬಳಿ ಬಂದು ಜಗಳವಾಡಿದ್ದಾನೆ. ತಮಿಳಿನಲ್ಲಿ ಬೈದಿದ್ದಾನೆ. ಮಾತು ವಿಕೋಪಕ್ಕೆ ತಿರುಗಿದಾಗ ಹಲ್ಲೆ ನಡೆದಿದೆ. ಇದರಿಂದ ಗ್ರಾಹಕನ ಮೂಗು ಮತ್ತು ತುಟಿಗಳಿಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ.
ಗಾಯಾಳು ಗ್ರಾಹಕ ಸಂಬಂಧಿಸಿದ ಇ-ಕಾಮರ್ಸ್ ಕಂಪನಿಯನ್ನು ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿ, “ಇಂತಹ ನಡೆಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ನೀತಿ ಹೊಂದಿದ್ದೇವೆ. ನಾವು ಇದನ್ನು ಆದ್ಯತೆಯ ಮೇಲೆ ತನಿಖೆ ಮಾಡುತ್ತೇವೆ. ಶೀಘ್ರದಲ್ಲೇ ಅಪ್ಡೇಟ್ ಹಂಚಿಕೊಳ್ಳಲಾಗುವುದು” ಎಂದು ತಿಳಿಸಿದೆ.
ಭಾರತೀಯ ನ್ಯಾಯಸಂಹಿತೆಯ 117, 126 ಮತ್ತಿತರ ಕಲಂಗಳಡಿ ಜೋಸೆಫ್ ಎಂಬ ಡೆಲಿವರಿ ಪ್ರತಿನಿಧಿ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

