ಉಪಯುಕ್ತ ಸುದ್ದಿ

ತುಂಗಭದ್ರಾ ಜಲಾಶಯ ನವೀಕರಣಕ್ಕೆ ಹಣಕಾಸು ಗೊಂದಲ: ₹10 ಕೋಟಿ ಅನುದಾನ ಹಿಂಪಡೆದ ಕರ್ನಾಟಕ ಸರ್ಕಾರ

Share It

ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿ ನೂತನ ಗೇಟ್‌ಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿರುವ ನಡುವೆಯೇ, ರಾಜ್ಯ ಸರ್ಕಾರ ಈ ಯೋಜನೆಗೆ ಬಿಡುಗಡೆ ಮಾಡಿದ್ದ ₹10 ಕೋಟಿ ಅನುದಾನವನ್ನು ಹಿಂಪಡೆದಿದೆ. ಅನುದಾನ ಸಂಬಂಧಿತ ಗೊಂದಲಗಳಿದ್ದರೂ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ ಗೇಟ್‌ಗಳ ನಿರ್ಮಾಣ ಹಾಗೂ ಅಳವಡಿಕೆಗಾಗಿ ಕರ್ನಾಟಕ ಸರ್ಕಾರ ₹10 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೆ, ಆಂಧ್ರಪ್ರದೇಶ ಸರ್ಕಾರ ಇದೇ ಉದ್ದೇಶಕ್ಕಾಗಿ ₹20 ಕೋಟಿ ನೀಡಿತ್ತು. ಜೊತೆಗೆ, ತುಂಗಭದ್ರಾ ಮಂಡಳಿಯ ನೌಕರರ ವೇತನಕ್ಕಾಗಿ ₹15 ಕೋಟಿ ಅನುದಾನವನ್ನು ಮಂಡಳಿಯೇ ಒದಗಿಸಿತ್ತು.

ಈ ನಡುವೆ ಕರ್ನಾಟಕ ಸರ್ಕಾರ ತನ್ನ ಪಾಲಿನ ₹10 ಕೋಟಿಯನ್ನು ವಾಪಸ್ ಪಡೆದಿದೆ. ಈ ಕುರಿತು ತುಂಗಭದ್ರಾ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹಣವನ್ನು ಮರಳಿ ನೀಡುವಂತೆ ಮನವಿ ಮಾಡಿದ್ದು, ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಕ್ರಸ್ಟ್‌ಗೇಟ್‌ಗಳ ತೆರವು ಹಾಗೂ ನೂತನ ಗೇಟ್‌ಗಳ ಅಳವಡಿಕೆಗೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ ಗೇಟ್ ಸಂಖ್ಯೆ 18ರಿಂದ ಕಾರ್ಯ ಆರಂಭವಾಗಿದ್ದು, ಅದನ್ನು ಪೂರ್ಣಗೊಳಿಸಲು ಎಂಟು ದಿನಗಳು ಬೇಕಾಯಿತು. ಗೇಟ್ ಸಂಖ್ಯೆ 15ರ ಕೆಲಸವೂ ಈಗ ಅಂತಿಮ ಹಂತ ತಲುಪಿದೆ. ಆರಂಭದಲ್ಲಿ ತಿಂಗಳಿಗೆ ಆರು ಗೇಟ್‌ಗಳನ್ನು ಅಳವಡಿಸುವ ಗುರಿ ಇಟ್ಟಿದ್ದ ಕಂಪನಿ, ಇದೀಗ ತಿಂಗಳಿಗೆ ಎಂಟು ಗೇಟ್‌ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದೆ.

ತುಂಗಭದ್ರಾ ಜಲಾಶಯದ ಎಲ್ಲ 33 ಹೊಸ ಕ್ರಸ್ಟ್‌ಗೇಟ್‌ಗಳನ್ನು ಜೂನ್ ಒಳಗಾಗಿ ಅಳವಡಿಸುವಂತೆ ಸಮಯ ಮಿತಿ ನಿಗದಿಪಡಿಸಲಾಗಿದ್ದು, ಮೇ ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಟೆಂಡರ್ ಪಡೆದ ಕಂಪನಿ ತಿಳಿಸಿದೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page