ಬೆೆಂಗಳೂರು: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಗ್ರಾಪಂ ಅಧ್ಯಕ್ಷೆಗೆ ನಿಂದನೆ ಮಾಡಿದ ಆರೋಪದಲ್ಲಿ ಪಿಡಿಒ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ದೊಡ್ಡಬಳ್ಳಾಪುದ ಕೋನಘಟ್ಟ ಗ್ರಾಪಂ ಅಧ್ಯಕ್ಷೆ ಕೊಠಡಿಗೆ ಹೋಗುವುದಿಲ್ಲ ಎಂದು ಹೇಳಿರುವ ಆರೋಪದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಶ್ಮಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ಅಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೊನಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಚಾಂದಿನಿ ನೀಡಿದ್ದ ದೂರು ಆಧರಿಸಿ ತಮ್ಮ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣಾ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಶ್ಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣಕ್ಕೆ ತಡೆ ನೀಡಿದೆ.
ಅಲ್ಲದೇ, ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ. ದೂರುದಾರೆಯ ಕೊಠಡಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆ ಮತ್ತು ಶಾಂತಿ ಕದಡುವುದನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಪರಾಧದಡಿ ಎಫ್‌ಐಆರ್ ದಾಖಲಾಗಿದೆ.
ಅರ್ಜಿದಾರರು ವಿವಾದಿತ ದಿನದಂದು ನಡೆದ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ ಎಂಬುದಾಗಿ ಅರ್ಜಿದಾರರ ಪರ ವಕೀಲರು ಫೋಟೋಗಳನ್ನು ಸಲ್ಲಿಸಿ ವಿವರಿಸಿದ್ದಾರೆ. ಎಸ್ಸಿ-ಎಸ್ಟಿ (ದೌರ್ಜನ್ಯ) ತಡೆ ಕಾಯ್ದೆಯ ದುರುಪಯೋಗಕ್ಕೆ ಈ ಪ್ರಕರಣವು ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಜೊತೆಗೆ, ಅರ್ಜಿದಾರರ ವಿರುದ್ದ ಎಫ್‌ಐಆರ್ಗೆ ಸಂಬಂಧಿಸಿದ ಎಲ್ಲ ತನಿಖೆಗೆ ತಡೆಯಾಜ್ಞೆ ನೀಡಿದ ಪೀಠ, ಅರ್ಜಿ ಸಂಬಂಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣಾ ಪೊಲೀಸರು ಮತ್ತು ಪ್ರಕರಣ ದೂರುದಾರರಾದ ಕೋನಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಚಾಂದಿನಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

