ರಾಯಚೂರು : ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು 7 ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ ಬರುವ 7 ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಅಂಗಡಿಗಳು ಭಸ್ಮವಾಗಿವೆ. ಆರನೇ ವಾರ್ಡ್ನಲ್ಲಿ ಬರುವ ದೆಹಲಿ ಬಜಾರ್, ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿ ಒಟ್ಟು 7 ಅಂಗಡಿಗಳಿಗೆ ಬೆಂಕಿ ಹತ್ತಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಹಾಸಪಟ್ಟು, ನಸುಕಿನ ಜಾವದವರೆಗೆ ಬೆಂಕಿ ನಂದಿಸಲಾಗಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಅಂಗಡಿಗಳಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.
ಒಂದರ ನಂತರ ಒಂದರಂತೆ ಏಳು ಅಂಗಡಿಗಳಿದ್ದು, ಒಂದು ಅಂಗಡಿಯಿಂದ ಮತ್ತೊಂದಕ್ಕೆ ಬೆಂಕಿ ಹರಡಿದೆ. ಬೇರೆ ಯಾವುದೇ ಅನಾಹುತ ಆಗದಂತೆ ಎಚ್ಚರವಹಿಸಿ ಬೆಂಕಿ ನಂದಿಸಲಾಗಿದೆ. ಅಲ್ಲದೆ ಭಾರೀ ದುರಂತ ತಪ್ಪಿದೆ. ಸದ್ಯ ಬೆಂಕಿಯಿಂದ ಆದ ನಷ್ಟದ ಪ್ರಮಾಣ ದೊರೆತಿಲ್ಲ.
ಪೊಲೀಸ್ ತನಿಖೆಯಿಂದ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಈ ಅಂಗಡಿಗಳು ಟಿನ್ಶೆಡ್ಗಳಿಂದ ಹಾಕಲಾಗಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ ಸಂಭವಿಸಿದೆ. ನಷ್ಟ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

