ಬೆಂಗಳೂರು: ಬೆಂಗಳೂರಿನ ಜನನಿಬಿಡ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ಬಿಎಂಟಿಸಿ ಬಸ್ ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿ ಬರುತ್ತಿದ್ದ ಬಸ್ ನ ಕೆಳ ಭಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಚಾಲಕರ ಹಾಗೂ ನಿರ್ವಾಹಕ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಸಿದ್ದಾರೆ. ಹೀಗಾಗಿ ಪ್ರಯಾಣಿಕರೆಲ್ಲ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣವೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶ್ವಿಯಾಗಿದ್ದಾರೆ. ಬೆಳಗ್ಗೆ ಸುಮಾರು 8.45 ರಲ್ಲಿ ನಡೆದ ಘಟನೆಯಿಂದ ಎಂಜಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು.
ಜನನಿಬಿಡ ಪ್ರದೇಶವಾದ ಕಾರಣ ಬೆಂಕಿ ಅತಿಯಾಗಿ ಆವರಿಸಿ, ಡಿಸೇಲ್ ಟ್ಯಾಂಕ್ ಸ್ಫೋಟಗೊಂಡು ಏನಾದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸಿದರೆ ಗತಿಯೇನು ಎಂಬ ಆತಂಕ ವಾಹನ ಸವಾರರನ್ನು ಕಾಡಿತ್ತು. ಸೂಕ್ತ ಸಮಯದಲ್ಲಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಆತಂಕ ದೂರ ಮಾಡಿದ್ದಾರೆ. ಬೆಂಕಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
