ಅಪಘಾತದಲ್ಲಿ ಕಾಲು ಕಳೆದುಕೊಂಡ ಸಿಬ್ಬಂದಿಗೆ ಪ್ರಥಮ ಬಾರಿಗೆ ರೂ.25 ಲಕ್ಷ ಪರಿಹಾರ ವಿತರಣೆ
ಮೃತ ಸಿಬ್ಬಂದಿ ಕುಟುಂಬಕ್ಕೆ ತಲಾ ರೂ.1 ಕೋಟಿ ಪರಿಹಾರ |ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿ ಅವಲಂಬಿತರಿಗೆ ತಲಾ ರೂ.10 ಲಕ್ಷ ಪರಿಹಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಪರಿಹಾರ ಯೋಜನೆ ಅಡಿ ಸಿಬ್ಬಂದಿ ಹಾಗೂ ಅವಲಂಭಿತರಿಗೆ ಪರಿಹಾರ ಚೆಕ್ ವಿತರಿಸಿದರು.
ಈ ಸಂದರ್ಭ ಸಚಿವರು, ಅಪಘಾತದಿಂದ ಮೃತಪಟ್ಟ ಸಿಬ್ಬಂದಿ ಅವಲಂಬಿತರಿಗೆ ಸಾಂತ್ವಾನ ಹೇಳಿ, ಜೀವ ಅಮೂಲ್ಯ. ಅವರನ್ನು ಮರಳಿ ತರಲು ಸಾಧ್ಯವಾಗುವುದಿಲ್ಲ, ಆದರೆ, ಅವಲಂಬಿತರ ಜೀವನ ಆರ್ಥಿಕ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಸಾರಿಗೆ ಸಿಬ್ಬಂದಿ ಹಗಲು ಇರಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಂಸ್ಥೆ ಉನ್ನತ ಸ್ಥಾನದಲ್ಲಿದೆ. ಮೃತ ಸಿಬ್ಬಂದಿ ಕುಟುಂಬ ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ಈಗಾಗಲೇ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1,000 ನೌಕರಿ ನೀಡಲಾಗಿದೆ ಎಂದರು.

ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಬೇಕು. ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಯಾರಿಗೂ ನೀಡದಂತೆ ಕಿವಿ ಮಾತು ಹೇಳಿದರು.
ಕಾರ್ಮಿಕರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಕೆಎಸ್ ಆರ್ ಟಿಸಿ ಆರೋಗ್ಯ ಯೋಜನೆ ಕೂಡ ಜಾರಿಗೆ ತಂದಿದ್ದು, ರಾಜ್ಯಾದಾದ್ಯಂತ 300 ಕ್ಕೂ ಅಧಿಕ ಆಸ್ಪತ್ರೆಗಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದ್ದು, ಈವರೆಗೂ 56,000 ಕ್ಕೂ ಹೆಚ್ಚು ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದರು.

ಇದೇ ಪ್ರಥಮ ಬಾರಿಗೆ ನಿಗಮದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಒಳಪಟ್ಟು, ಬಲಗಾಲಿನ ಮಂಡಿಯ ಕೆಳಗೆ ಕಾಲನ್ನು ಕಳೆದುಕೊಂಡ ಸುನಿಲ್ ಕುಮಾರ್ ಬಿ.ಡಿ., ಚಾಲಕ-ಕಂ-ನಿರ್ವಾಹಕ, ಬಿಲ್ಲೆ ಸಂಖ್ಯೆ. 1624, ಅರಕಲಗೂಡು ಘಟಕ, ಹಾಸನ ವಿಭಾಗ ರವರಿಗೆ ಪರಿಹಾರವಾಗಿ ರೂ.25.00 ಲಕ್ಷಗಳನ್ನು ವಿತರಿಸಲಾಯಿತು.
ಇದಲ್ಲದೆ ದಿನಾಂಕ: 25-03-24 ರಿಂದ 09-12-24 ರವರೆಗೆ 08 ತಿಂಗಳು 14 ದಿನಗಳ ಅವಧಿಗೆ ಐಓಡಿ ನೀಡಲಾಗಿದೆ. ಸಂಸ್ಥೆ ವತಿಯಿಂದ ಪೂರ್ಣ ವೈದ್ಯಕೀಯ ವೆಚ್ಚ 4,85,762 ರೂ.ಗಳನ್ನು ಭರಿಸಲಾಗಿದೆ ಹಾಗೂ ಸದರಿ ನೌಕರರಿಗೆ ಲಘು ಹುದ್ದೆ ನೀಡಿ ತಾಂತ್ರಿಕ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.
ಕಾರ್ಯಕ್ರಮದಲ್ಲಿ ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, KSRTC ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ವಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಹಾಗೂ ಅಧಿಕಾರಿಗಳು ಇದ್ದರು.


