ಮೂಡುಬಿದಿರೆ : ಶಿರ್ತಾಡಿಯ ಭುವನ ಜ್ಯೋತಿ ವಿದ್ಯಾ ಸಮಚ್ಚಯದಲ್ಲಿ ಮೂಡುಬಿದರೆಯಲ್ಲಿಯೇ ಪ್ರಪ್ರಥಮ ಕಾನೂನು ವಿದ್ಯಾಲಯ ಪ್ರಾರಂಭವಾಗುತ್ತಿದೆ. ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ಬೆಳುವಾಯಿ ಎಸ್. ಅಬ್ದುಲ್ ನಜೀರ್ ಅವರು ನೂತನ ಕಾನೂನು ವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.
ನೂತನ ವಿದ್ಯಾಲಯಕ್ಕೆ ಈಗಾಗಲೇ 25 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಹುಬ್ಬಳ್ಳಿ ಮತ್ತು ಭಾರತೀಯ ಕಾನೂನು ಬಾರ್ ಕೌನ್ಸಿಲ್ ದೆಹಲಿಗಳಿಂದ ಒಪ್ಪಿಗೆ ಸಿಕ್ಕಿದೆ. ಪ್ರಸ್ತುತ ಬಿ ಬಿ ಎ ಎಲ್ ಎಲ್ ಬಿ ಕೋರ್ಸಿಗೆ ಅನುಮತಿ ಸಿಕ್ಕಿದೆ.
ಆಗಸ್ಟ್ 10 ರ ಶನಿವಾರ ಬೆಳಗ್ಗೆ 11 ಗಂಟೆಗೆ ಭುವನ ಜ್ಯೋತಿ ಕಾನೂನು ವಿದ್ಯಾಲಯ ಉದ್ಘಾಟನೆಯಾಗಲಿದೆ ಎಂದು ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆರ್. ಪ್ರಶಾಂತ ಡಿ ಸೋಜಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಕೃಷ್ಣ ಎಸ್. ದೀಕ್ಷಿತ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಉಪಕುಲಪತಿ ಡಾ.ಸಿ.ಬಸವರಾಜು, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲ್ ರಾಜು ಎಚ್ ಎಲ್,
ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮೂಡುಬಿದರೆ ತಾಲೂಕಿನಲ್ಲಿಯೇ ಪ್ರಪ್ರಥಮ ಕಾನೂನು ಕಾಲೇಜು ಇದಾಗಿದೆ. ಈಗಾಗಲೇ ಐದು ವರ್ಷದ ಕೋರ್ಸಿಗೆ ಸ್ಥಳೀಯ ಮತ್ತು ಆಸುಪಾಸಿನ 25 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು, ಆಗಸ್ಟ್ 28 ರ ನಂತರ ಮೂರು ವರ್ಷದ ಎಲ್ ಎಲ್ ಬಿ ಪ್ರಾರಂಭಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರದೀಪ್ ಎಂ.ಡಿ. ಮಾತನಾಡಿ, ಕಾಲೇಜಿನಲ್ಲಿರುವ ಸೌಲಭ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿಯಲ್ಲಿ ಶೇಕಡಾ 45ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ನೇರವಾಗಿ ಈ ಕೋರ್ಸಿನ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಬೇಕಾದ ಕಾನೂನು ಪುಸ್ತಕಗಳು, ಈ ಪುಸ್ತಕಗಳು, ಇ ಜರ್ನಲ್ಸ್, ವಿಶೇಷ ಕಲಿಕೆಯ ರಿಸರ್ಚ್ ಪುಸ್ತಕಗಳು ಲಭ್ಯವಿದ್ದು, ಸಾಕಷ್ಟು ಪುಸ್ತಕಗಳನ್ನು ಲೈಬ್ರೆರಿಯಲ್ಲಿ ಸಂಗ್ರಹ ಮಾಡಲಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅಗತ್ಯವಿರುವ ಮೂಟ್ ಕೋರ್ಟ್ ಸ್ಥಾಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಬೇಕಾದ ಎಲ್ಲಾ ಪೂರಕ ಸೌಲಭ್ಯಗಳನ್ನು ಇಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾಲಯದ ಅಧ್ಯಕ್ಷ ರಾಘವೇಂದ್ರ ಪ್ರಭು ಮಾತನಾಡಿ, 3 ವರ್ಷದ ಪದವಿಯೋತ್ತರ ಕಾನೂನು ಪದವಿಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಸದ್ಯದಲ್ಲೇ ಇದು ಸಹ ಪ್ರಾರಂಭವಾಗಲಿದೆ ಎಂದರು.
ಶಿರ್ತಾಡಿಯ ಮುಖ್ಯ ಪ್ರದೇಶದಲ್ಲಿ ಈ ವಿದ್ಯಾ ಸಂಸ್ಥೆ ಇದೆ. ಪ್ರಶಾಂತ ವಾತಾವರಣ ಮತ್ತು ವಿಶಾಲವಾದ ಜಾಗವನ್ನು ಒಳಗೊಂಡಿದೆ. ಶಿರ್ತಾಡಿಯ ಸುಂದರ ಪ್ರದೇಶದಲ್ಲಿ ಕಾನೂನು ಕಾಲೇಜು ಪ್ರಾರಂಭಗೊಂಡಿರುವುದು ಸುತ್ತಮುತ್ತಲ ಜನರಲ್ಲಿ ಸಂತಸ ಉಂಟು ಮಾಡಿದೆ. ಕೋರ್ಸಿಗೆ ಸೇರಬಯಸುವ ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ :
9364899733 ಮತ್ತು 9364899734 ಇಲ್ಲಿಗೆ ಸಂಪರ್ಕಿಸಬಹುದು.
ಸಂಚಾಲಕ ಪ್ರಶಾಂತ ಎನ್, ಖಜಾಂಚಿ ಲತಾ ಎ ಉಪಸ್ಥಿತರಿದ್ದರು.