ರಾಜಕೀಯ ಸುದ್ದಿ

ಮಾರ್ಚ್ ಮಧ್ಯದಲ್ಲಿ ಪಂಚರಾಜ್ಯ ಚುನಾವಣೆ ವೇಳಾಪಟ್ಟಿ ಪ್ರಕಟ ಸಾಧ್ಯತೆ

Share It

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣಾ ವೇಳಾಪಟ್ಟಿಯನ್ನು ಮಾರ್ಚ್ ಮಧ್ಯಭಾಗದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯುವ ನಿರೀಕ್ಷೆಯಿದ್ದು, ಚುನಾವಣಾ ಆಯೋಗ ಈಗಾಗಲೇ ಅಗತ್ಯ ಪೂರ್ವಸಿದ್ಧತೆಗಳನ್ನು ಆರಂಭಿಸಿದೆ.

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ಈ ಚುನಾವಣೆಯ ದಿನಾಂಕಗಳನ್ನು ಮಾರ್ಚ್ ಮಧ್ಯದಲ್ಲಿ ಘೋಷಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ ರಾಜ್ಯದ ಪರಿಸ್ಥಿತಿಯನ್ನು ಅವಲಂಬಿಸಿ ಮತದಾನವು ಒಂದು ಅಥವಾ ಬಹು ಹಂತಗಳಲ್ಲಿ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಐದು ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ. ಪುದುಚೇರಿ ವಿಧಾನಸಭೆಯ ಅವಧಿ ಜೂನ್ 15ರಂದು ಅಂತ್ಯಗೊಳ್ಳುತ್ತದೆ. ಅಸ್ಸಾಂ ವಿಧಾನಸಭೆಯ ಅವಧಿ ಮೇ 20ರಂದು, ಕೇರಳದದು ಮೇ 23ರಂದು, ತಮಿಳುನಾಡಿನದು ಮೇ 10ರಂದು ಹಾಗೂ ಪಶ್ಚಿಮ ಬಂಗಾಳದದು ಮೇ 7ರಂದು ಕೊನೆಗೊಳ್ಳಲಿದೆ.

ಚುನಾವಣಾ ಆಯೋಗವು ರಾಜ್ಯಗಳ ಸಿದ್ಧತೆಯನ್ನು ಪರಿಶೀಲಿಸಲು ಅಧಿಕಾರಿಗಳ ತಂಡಗಳನ್ನು ಕಳುಹಿಸಿದೆ. ಸದ್ಯ ಚುನಾವಣಾ ತಂಡ ಅಸ್ಸಾಂನಲ್ಲಿ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆದಿದ್ದರೆ, ಅಸ್ಸಾಂನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಪೂರ್ವಸಿದ್ಧತಾ ಕ್ರಮಗಳ ಭಾಗವಾಗಿ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಪುದುಚೇರಿ ಫೆಬ್ರವರಿ 14ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ರಾಜ್ಯವಾಗಿದೆ. ತಮಿಳುನಾಡು ಕೂಡ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಸಜ್ಜಾಗಿದೆ. ಕೇರಳ ಫೆಬ್ರವರಿ 21ರಂದು ತನ್ನ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿ 28ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ಬಳಿಕ ಫೆಬ್ರವರಿ 10ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಚುನಾವಣೆ ಘೋಷಣೆಗೆ ಮುನ್ನ ಎಲ್ಲಾ ರಾಜ್ಯಗಳಲ್ಲಿ ಆಡಳಿತಾತ್ಮಕ ಹಾಗೂ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಯುತ್ತಿದ್ದು, ಅಧಿಕೃತ ವೇಳಾಪಟ್ಟಿ ಪ್ರಕಟವಾದ ಬಳಿಕ ರಾಜಕೀಯ ಚಟುವಟಿಕೆಗಳು ವೇಗ ಪಡೆಯುವ ಸಾಧ್ಯತೆ ಇದೆ.


Share It

You cannot copy content of this page