ಒಂದೇ ಬೈಕ್‌ನಲ್ಲಿ ನಾಲ್ವರ ಸವಾರಿ: ಟಿಪ್ಪರ್‌ಗೆ ಗುದ್ದಿ ಸೋದರರು ಸೇರಿ ನಾಲ್ವರ ಸಾವು
ಚಿಕ್ಕಬಳ್ಳಾಪುರ: ಬೈಕ್‌ವೊಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸಹೋದರರಿಬ್ಬರು ಸೇರಿ ಒಂದೇ ಗ್ರಾಮದ ನಾಲ್ವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಕಳೆದ ಗುರುವಾರ ರಾತ್ರಿ ಘಟನೆ ನಡೆದಿದೆ. ನರಸಿಂಹಮೂರ್ತಿ (27), ನಂದೀಶ್ (25), ಅರುಣ್ (18), ಮನೋಜ್ (19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರು ಅಜ್ಜವಾರ ಗ್ರಾಮದವರು. ಇವರಲ್ಲಿ ನರಸಿಂಹಮೂರ್ತಿ ಮತ್ತು ನಂದೀಶ್ ಸಹೋದರರಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪರಿಶೀಲನೆ ನಡೆಸಿದ್ದು, ಮೃತರು ಒಂದೇ ಗ್ರಾಮದ ಯುವಕರು. ಒಂದೇ ಬೈಕ್‌ನಲ್ಲಿ ನಾಲ್ವರು ಚಿಕ್ಕಬಳ್ಳಾಪುರದಿಂದ ಅಜ್ಜವಾರ ಗ್ರಾಮಕ್ಕೆ ಬರುತ್ತಿದ್ದರು, ಈ ವೇಳೆ ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರದತ್ತ ಟಿಪ್ಪರ್ ಬರುತ್ತಿತ್ತು. ಆಗ ಬೈಕ್ ಮತ್ತು ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿದೆ ಎಂದರು.
ರಸ್ತೆಯಲ್ಲಿ ಬಲಕ್ಕೆ ತೆಗೆದುಕೊಳ್ಳುವಾಗ ಟಿಪ್ಪರ್‌ಗೆ ಬೈಕ್ ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ಇದೆ. ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸಂಚಾರಿ ನಿಯಮದ ಉಲ್ಲಂಘನೆಯಾಗಿದ್ದು, ತಪ್ಪು ಯಾರದ್ದು ಎಂಬುದರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚೌಕ್ಸೆ ತಿಳಿಸಿದ್ದಾರೆ.


