ಬೆಳಗಾವಿ: ಆಸ್ತಿ ಖರೀದಿ ಸೇರಿದಂತೆ ವಿವಿಧ ಆಸೆಯೊಡ್ಡಿ, ವಿಡಿಯೋ ಕಾಲ್ನಲ್ಲಿ ಹಣ ತೋರಿಸಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಅನಂತ ಗುರುನಾಥ್ ಮತ್ತು ವಿಲಾಸ್ ಎಂಬುವವರು ಬಂಧಿತರು. ಇವರು ತಮ್ಮ ಬಳಿ ಕೋಟ್ಯಾಂತರ ರು ಹಣವಿದೆ. ಅದನ್ನು ಹೂಡಿಕೆ ಮಾಡಬೇಕು ಎಂದು ನಂಬಿಸಿ ಅನೇಕರಿಗೆ ವಂಚನೆ ಮಾಡಿದ್ದರು. ಅವರ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿದ್ದವು.
ಹೀಗೆ ವಂಚನೆ ಮಾಡಿದ ಆಧಾರದ ಮೇಲೆ ಅವರನ್ನು ಬಂಧಿಸಿದ್ದು, 56 ಲಕ್ಷ ನಕಲಿ ನೋಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಲ್ಡçನ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನ ನಕಲಿ ನೋಟ್ಗಳನ್ನು ಬಳಸಿ, ವಿಡಿಯೋ ಕಾಲ್ ಮೂಲಕ ತೋರಿಸಿ ನಂಬಿಸುತ್ತಿದ್ದರು.
ಪ್ರತಿ ಕಂತೆಯಲ್ಲಿ ಎರಡು ಅಸಲಿ ನೋಟುಗಳನ್ನಿಟ್ಟು, ಉಳಿದ ನಕಲಿ ನೋಟುಗಳನ್ನಿಡುತ್ತಿದ್ದರು. 56 ಲಕ್ಷ 500 ಮುಖಬೆಲೆ ಇರುವ ನಕಲಿ ನೋಟುಗಳು ಮತ್ತು 2.60 ಲಕ್ಷ ಅಸಲಿ ನೋಟ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
