ಬೆಂಗಳೂರು: ದೇವೇಗೌಡರ ಕುಟುಂಬ, ಅದರಲ್ಲೂ ಎಚ್.ಡಿ.ರೇವಣ್ಣ ಶಾಸ್ತ್ರ ನೋಡದೆ, ಶವಸಂಸ್ಕಾರಕ್ಕೂ ಹೋಗುವುದಿಲ್ಲ ಎಂಬ ಮಾತಿದೆ. ಇಂತಹ ಮಹಾಶಾಸ್ತ್ರ ಸಂಪ್ರದಾಯಸ್ಥ ಕುಟುಂಬದ ಹಣೆಬರಹ ಶುಕ್ರವಾರದಂದೇ ನಿರ್ಧಾರವಾಗಲಿರುವುದು ವಿಶೇಷ.
ಪೆನ್‌ಡ್ರೈವ್ ಪ್ರಕರಣ ದೇವೇಗೌಡರ ಕುಟುಂಬವನ್ನು ಇನ್ನಿಲ್ಲದಂತೆ ಜರ್ಜರಿತರನ್ನಾಗಿ ಮಾಡಿದೆ. ರೇವಣ್ಣರನ್ನು ಜೈಲಿಗೇ ಕಳುಹಿಸಿದೆ. ಇನ್ನು ಪತ್ನಿ ಭವಾನಿ ಕೂಡ ಜೈಲಿಗೋಗುವ ಭಯದಲ್ಲಿ ಜಾಮೀನಿಗೆ ಅರ್ಜಿ ಹಾಕಿ ಕೊಂಡಿದ್ದಾರೆ. ಇನ್ನು ಪುತ್ರನ ಕತೆಯಂತೂ ಹೇಳತೀರದು. ಹೀಗಾಗಿ, ರೇವಣ್ಣ ಜೈಲಿನಿಂದ ಬರುತ್ತಿದ್ದಂತೆ ದೇವಸ್ಥಾನದ ಮೇಲೆ ದೇವಸ್ಥಾನಕ್ಕೆ ರೌಂಡ್ ಹೊಡೆಯುತ್ತಿದ್ದಾರೆ.
ತಪ್ಪು ಮಾಡಿದಾಗ ದೇವರು ಕಾಪಾಡುವುದಿಲ್ಲ ಎಂಬ ಮಾತಿದೆ. ಅಂತೆಯೇ ಆಗಿದೆ ರೇವಣ್ಣನ ಸ್ಥಿತಿ. ಈಗಾಗಲೇ ಜೈಲಿಗೆ ಹೋಗಿ ಬಂದಿದ್ದು, ಜಾಮೀನು ಪಡೆದಿದ್ದಾರೆ. ಆ ಜಾಮೀನು ರದ್ದು ಮಾಡುವಂತೆಯೂ ಎಸ್‌ಐಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದ್ದು, ರೇವಣ್ಣನ ಜಾಮೀನು ಮುಂದುವರಿಯುತ್ತದೆಯೋ ಅಥವಾ ಹೈಕೋರ್ಟ್ ಜಾಮೀನು ರದ್ದುಗೊಳಿಸಿ, ಎಸ್‌ಐಟಿ ವಶಕ್ಕೆ ಮತ್ತೇ ರೇವಣ್ಣ ಅವರನ್ನು ಕೊಡುತ್ತದೆಯೋ ಎಂಬುದೀಗ ಯಕ್ಷಪ್ರಶ್ನೆ.
ಕೆ.ಆರ್. ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಜತೆಗೆ, ಭವಾನಿ ಅವರ ಮೇಲೆಯೂ ಪ್ರಕರಣ ದಾಖಲಾಗಿದೆ. ಅದರಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಭವಾನಿ ರೇವಣ್ಣ ಅವರು, ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅದರ ಮುಂದಿನ ವಿಚಾರಣೆಯನ್ನು ಕೂಡ ಶುಕ್ರವಾರಕ್ಕೆ ಮುಂದೂಡಿದೆ. ಹೀಗಾಗಿ, ರೇವಣ್ಣ ಜತೆಗೆ ಭವಾನಿ ಭವಿಷ್ಯವೂ ಶುಕ್ರವಾರವೇ ನಿರ್ಧಾರವಾಗಲಿದೆ.
ಇನ್ನು “ಪೆನ್ ಡ್ರೈವ್ ಪುರುಷೋತ್ತಮ” ಪ್ರಜ್ವಲ್ ಕತೆಯಂತೂ ಹೇಳತೀರದು. ಒಂದು ತಿಂಗಳಿಂದ ಎಸ್ ಐಟಿ ಪೊಲೀಸರನ್ನು ಆಟವಾಡಿಸಿರುವುದು ನೋಡಿದರೆ, ಬೆಂಗಳೂರಿಗೆ ಬಂದಿಳಿಯುತಿದ್ದಂತೆ ಪೊಲೀಸರು, ಪ್ರಜ್ವಲ್ ನನ್ನು ವಶಕ್ಕೆ ಪಡೆಯುವುದು ಖಚಿತ. ಗುರುವಾರ ರಾತ್ರಿಯೇ ವಶಕ್ಕೆ ಪಡೆದರೂ, ಶುಕ್ರವಾರ ಮಧ್ಯಾಹ್ನದ ವೇಳೆ ನ್ಯಾಯಾಲಯದ ಮುಂದೆ ಹಾಜರು ಮಾಡಿ, ನಂತರ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಎಸ್‌ಐಟಿ ತೀರ್ಮಾನಿಸಿದೆ.
ಹೀಗಾಗಿ, ಪ್ರಜ್ವಲ್ ರೇವಣ್ಣ ಅಂತೂ ಶುಕ್ರವಾರ ಪೊಲೀಸ್ ವಶಕ್ಕೆ ಅಥವಾ ಜೈಲು ವಾಸಕ್ಕೆ ಹೋಗುವುದು ಬಹುತೇಕ ಖಚಿತ. ರೇವಣ್ಣನ ಪ್ರಕಾರ ಶುಕ್ರವಾರ ಅವರ ಕುಟುಂಬಕ್ಕೆ ಶುಭವಾದ್ದಲ್ಲಿ, ರೇವಣ್ಣ ಮತ್ತು ಅವರ ಪತ್ನಿ ಭವಾನಿ ಜಾಮೀನು ಪಡೆದುಕೊಂಡು, ಬಂಧನದ ಭೀತಿಯಿಂದ ಪಾರಾಗಬಹುದು. ಆದರೆ, ಪ್ರಜ್ವಲ್ ಗೆ ಮಾತ್ರ, ಎಸ್‌ಐಟಿ ಕಸ್ಟಡಿ ಅಥವಾ ನ್ಯಾಯಾಂಗ ಬಂಧನ ಕಟ್ಟಿಟ್ಟ ಬುತ್ತಿ. ಹೀಗಾಗಿ, ರೇವಣ್ಣನ ಟೆಂಪಲ್ ರನ್ ಮತ್ತಷ್ಟು ಮುಂದುವರಿಯುತ್ತದೆ.
