ಬೆಂಗಳೂರು: ಸಜಾಬಂಧಿಯಾಗಿರುವ ವ್ಯಕ್ತಿಯ ದಾಂಪತ್ಯ ಜೀವನಕ್ಕೆ ಅವಕಾಶ ಕೊಟ್ಟಿದ್ದ ಹೈಕೋರ್ಟ್, ಇದೀಗ ಆತನಿಗೆ ಸಂತಾನ ಪಡೆಯುವುದಕ್ಕೂ 30 ದಿನಗಳ ಪೆರೋಲ್ ಮಂಜೂರು ಮಾಡಿ ಆದೇಶ ಮಾಡಿದೆ.
ಹತ್ತು ವರ್ಷಗಳ ಜೈಲು ಶಿಕ್ಷೆ ಅನಿಭವಿಸುತ್ತಿರುವ ಆನಂದ್ ಎಂಬ ವ್ಯಕ್ತಿಯನ್ನು ಯುವತಿಯೊಬ್ಬಳು ಪ್ರೀತಿಸಿ, ಶಿಕ್ಷೆ ಅನುಭವಿಸುವ ವೇಳೆಯಲ್ಲಿಯೇ ಹೈಕೋರ್ಟ್ ಅನುಮತಿಯೊಂದಿಗೆ ಮದುವೆಯಾಗಿದ್ದಳು. ಇದೀಗ ತಾನು ಸಂತಾನ ಪಡೆಯಲು ಪತಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಆತನಿಗೆ 30 ದಿನಗಳ ಪೆರೋಲ್ ಪಡೆದುಕೊಳ್ಳುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ.
ಕೊಲೆ ಪ್ರಕರಣವೊಂದರಲ್ಲಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್ ಆ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023ರಲ್ಲಿ ತೀರ್ಪು ನೀಡಿತ್ತು. ಜೈಲಿಗೆ ಹೋಗುವ ಮುನ್ನವೇ ಆನಂದ್ ಮತ್ತು ಯುವತಿ ಪೀತಿ ಮಾಡುತ್ತಿದ್ದು, ಜೈಲಿಗೆ ಹೋದ ನಂತರ ಅವರ ಪ್ರೀತಿ ಮುಂದುವರಿದಿತ್ತು. ಮದುವೆಯಾಗಲು ಅವರು ನಿಶ್ಚಯಿಸಿದ್ದರು.
ಆಗ ತನ್ನನ್ನು ಮದುವೆಯಾಗಲು ಅನುಮತಿ ಕೇಳಿ ಯುವತಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಮ್ಮತಿಸಿದ ಹೈಕೋರ್ಟ್, ಆನಂದ್‌ನನ್ನು 2023 ರ ಮಾ. 31 ರಿಂದ 80 ದಿನ ಕಾಲ ಪೆರೋಲ್ ಮೇಲೆ ಬಿಡುಗಡೆಗೊಳಿಸಲು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ಹೈಕೋರ್ಟ್ ಆದೇಶಿಸಿತ್ತು. ಅಂತೆಯೇ ಮದುವೆಯಾಗಿರುವ ಯುವತಿ, ಇದೀಗ ತಮ್ಮ ಸಂತಾನ ವೃದ್ಧಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಳು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು, ಅರ್ಜಿದಾರೆಯ ಪತಿಯನ್ನು ಜೂ. 5 ರಿಂದ 30 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು. ಈ ಅವಧಿಯಲ್ಲಿ ಆನಂದ್ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. 30 ದಿನಗಳ ನಂತರ ಪೆರೋಲ್ ಷರತ್ತು ಪಾಲಿಸಿದ್ದಲ್ಲಿ, ಅದರ ಆಧಾರದ ಮೇಲೆ ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆಗೆ ಆನಂದ್ ಹಾಗೂ ಅರ್ಜಿದಾರೆ ಕೋರಬಹುದು ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲ ಡಿ.ಮೋಹನ್‌ಕುಮಾರ್ ವಾದ ಮಂಡಿಸಿ, ಆನಂದ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾಬಂಧಿಯಾಗಿದ್ದಾರೆ. ಅರ್ಜಿದಾರೆಯನ್ನು ಮದುವೆಯಾಗಲು ಆನಂದ್‌ನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಸದ್ಯ ದಂಪತಿ ಸಂತಾನ ಪಡೆಯಲು ಇಚ್ಛಿಸಿದ್ದಾರೆ. ಅದಕ್ಕಾಗಿ ಆನಂದ್‌ಗೆ 90 ದಿನ ಪೆರೊಲ್ ಮೇಲೆ ಮಂಜೂರು ಮಾಡಬೇಕು.
ಈ ಕುರಿತ ಅರ್ಜಿದಾರೆ ಸಲ್ಲಿಸಿರುವ ಮನವಿಯನ್ನು ಜೈಲು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಸರ್ಕಾರಿ ವಕೀಲರು, ಅರ್ಜಿದಾರೆ ಮನವಿ ಪುರಸ್ಕರಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಹೀಗಾಗಿ, ಜೈಲಿನಲ್ಲಿದ್ದರೂ ಮಕ್ಕಳನ್ನು ಪಡೆಯುವ ಆಸೆಗೆ ಜೀವ ತಂದುಕೊಳ್ಳಲು ದಂಪತಿ ತೀರ್ಮಾನಿಸಿದ್ದಾರೆ.