ಬೆಂಗಳೂರು: ಹೊಸ ವರ್ಷಾಚರಣೆಗೆ ಕಿಕ್ಕೇರಿಸಿಕೊಳ್ಳಲು ಸರಕಾರ ಅನುವು ಮಾಡಿಕೊಟ್ಟಿದ್ದು, ಡಿ.31ರ ಬೆಳಗ್ಗೆ 6 ಗಂಟೆಯಿಂದಲೇ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿದೆ.
ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ ಡಿಸೆಂಬರ್ ೩೧ರಂದು ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ 1 ರವರೆಗೆ ಮದ್ಯದ ವಹಿವಾಟು ಮತ್ತು ಮದ್ಯ ಸೇವನೆಗೆ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಸಿಎಲ್-5 ಸನ್ನದುದಾರರಿಗೆ ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 10.30 ರಿಂದ ರಾತ್ರಿ 12 ರವರೆಗೆ ಮಾತ್ರ ಮದ್ಯದ ವಹಿವಾಟು ನಡೆಸಲು ಅವಕಾಶವಿತ್ತು. ಆದರೆ, ಹೊಸ ವರ್ಷಾಚರಣೆಗಾಗಿ ಡಿ.31 ರಂದು ಬೆಳಗ್ಗೆ 6 ಗಂಟೆಯಿAದ ತಡರಾತ್ರಿ 1ರವರೆಗೆ ಮದ್ಯದ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.
ಸಿಎಲ್-5 ತಾತ್ಕಾಲಿಕವಾಗಿ (24 ಗಂಟೆಗಳಿಗೆ) ಮದ್ಯದ ಸನ್ನದು ಆಗಿದ್ದು, ವಿಶೇಷ ಸಂದರ್ಭಗಳಲ್ಲಿ ಮದ್ಯ ಬಳಕೆಗೆ ಅನುಮತಿ ನೀಡುತ್ತದೆ. ಈ ಸನ್ನದು ಮುಖ್ಯವಾಗಿ ಖಾಸಗಿ ಪಾರ್ಟಿಗಳು, ನಿರ್ದಿಷ್ಟ ದಿನಗಳಂದು ನಡೆಯುವ ಸಮಾರಂಭಗಳಿಗೆ ಮದ್ಯ ಮಾರಾಟ ಅಥವಾ ಪೂರೈಕೆ ಮಾಡಲು ಅನುಮತಿ ನೀಡುತ್ತದೆ. ಈ ಲೈಸೆನ್ಸ್ ಹೊಂದಿರುವವರು ಸಾಮಾನ್ಯವಾಗಿ ಹೊಸ ವರ್ಷದಂತಹ ವಿಶೇಷ ಸಂದರ್ಭಗಳಲ್ಲಿ ಒಂದು ದಿನ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶವಿರುತ್ತದೆ.
CL-5 ಸನ್ನದುದಾರರು ಸಹ ಅಬಕಾರಿ ಇಲಾಖೆ ನಿಯಮಗಳ ಪ್ರಕಾರವೇ ಮದ್ಯದ ಸರಕು ಖರೀದಿಸಬೇಕು ಮತ್ತು ಮಾರಾಟ ಮಾಡಬೇಕು. ಸಿಎಲ್- 5 ಸನ್ನದು ಇಲ್ಲದೆ ವಿಶೇಷ ಸಾಂದರ್ಭಿಕ ಕಾರ್ಯಕ್ರಮಗಳಲ್ಲಿ ಮದ್ಯ ಮಾರಾಟ ಅಥವಾ ಸೇವನೆಯು ಕಾನೂನು ಪ್ರಕಾರ ಅಪರಾಧವಾಗುತ್ತದೆ.

