ಗಂಗಾವತಿ (ಕೊಪ್ಪಳ): ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಅನಧಿಕೃತ ರೆಸಾರ್ಟ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಖಡಕ್ ಆದೇಶ ಮಾಡಿದ ಬೆನ್ನಲ್ಲೇ ಅಲರ್ಟ್ ಆದ ಅಧಿಕಾರಿಗಳು ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ.
ಬಸಾಪುರ, ಆನೆಗೊಂದಿ, ಸಣಾಪುರ ಭಾಗದಲ್ಲಿನ ಜೆಸ್ಕಾಂ, ಕಂದಾಯ, ಪಂಚಾಯತ್ ರಾಜ್, ಅಬಕಾರಿ ಸೇರಿ ನಾನಾ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ದಾಳಿ ಮಾಡಿವೆ. ಕೆಲವೆಡೆ ಯಾವುದೇ ಇಲಾಖೆ ಅನುಮತಿ ಪಡೆಯದೆ, ಕೃಷಿ ಭೂಮಿ ವಾಣಿಜ್ಯಕರಣಕ್ಕೆ ಪರಿವರ್ತನೆ ಮಾಡದೇ ಅನಧಿಕೃತ ರೆಸಾರ್ಟ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ನಿಯಮ ಉಲ್ಲಂಘಿಸಿದ ರೆಸಾರ್ಟ್ಗಳ ಡೋರ್ ಲಾಕ್ ಮಾಡಿದ್ದಾರೆ.
ಜೆಸ್ಕಾಂ ಇಲಾಖೆಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿ ಮೀಟರ್ ಕಿತ್ತುಕೊಂಡರೆ, ಪಂಚಾಯಿತಿ ವಾಟರ್ಮನ್ಗಳು ನೀರಿನ ಸಂಪರ್ಕ ಕಡಿತ ಮಾಡಿದ್ದಾರೆ. ಕಂದಾಯ ಅಧಿಕಾರಿಗಳು ರೆಸಾರ್ಟ್ಗಳಿಗೆ ಬೀಗ ಜಡಿದಿದ್ದಾರೆ. ಬಸಾಪುರ ಭಾಗದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಸುಮಾರು 150ಕ್ಕೂ ಹೆಚ್ಚು ರೆಸಾರ್ಟ್ಗಳ ಪೈಕಿ 98ಕ್ಕೂ ಹೆಚ್ಚು ಅನಧಿಕೃತವಾಗಿದ್ದರೆ, ಗಂಗಾವತಿ ತಾಲೂಕಿನ 50ರ ಪೈಕಿ 40 ಅನಧಿಕೃತ ಎಂದು ಪತ್ತೆ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಅನಧಿಕೃತ ರೆಸಾರ್ಟ್ಗಳ ಮೇಲೆ ತಹಶೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದ ಸಿಬ್ಬಂದಿ ಸಣಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಆನೆಗೊಂದಿ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ.
ಆನೆಗೊಂದಿ ಭಾಗದ ಒಟ್ಟು 50 ರೆಸಾರ್ಟ್ಗಳ ಪೈಕಿ 40 ಅನಧಿಕೃತ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಆನೆಗೊಂದಿ, ಸಣಾಪುರ, ಮಲ್ಲಾಪುರ, ಸಂಗಾಪುರ ಪಂಚಾಯಿತಿ ವ್ಯಾಪ್ತಿಯ 40 ರೆಸಾರ್ಟ್ಗಳಿಗೆ ಬೀಗ ಹಾಕಲಾಗಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
40ರ ಪೈಕಿ ಆನೆಗೊಂದಿಯಲ್ಲಿ ಹತ್ತು, ಹನುಮನಹಳ್ಳಿಯಲ್ಲಿ ಐದು, ಅಂಜನಹಳ್ಳಿಯಲ್ಲಿ ಮೂರು, ಸಂಗಾಪುರದಲ್ಲಿ ಹತ್ತು, ಚಿಕ್ಕರಾಂಪುರ, ಮಲ್ಲಾಪುರ ಸೇರಿ ಇತರ ಗ್ರಾಮಗಳಲ್ಲಿ 12 ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ.

