ಅಪರಾಧ ರಾಜಕೀಯ ಸುದ್ದಿ

ಗೌರಿ ಲಂಕೇಶ್ ಕೊಲೆ: ಆರೋಪಿಗಳ ನೋಟ್‌ಬುಕ್‌ನ 199 ಪುಟಗಳು ಮಾಯ

Share It


ಬೆಂಗಳೂರು: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ವಶಪಡಿಸಿಕೊಂಡ ನೋಟ್‌ಬುಕ್‌ಗಳಲ್ಲಿನ 199 ಪುಟಗಳು ಕಣ್ಮರೆಯಾಗಿವೆ.

ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳಾಗಿ ಬಂಧಿತರಾಗಿರುವ ಗಣೇಶ್ ಮಸ್ಕಿನ್ ಪರ ವಕೀಲರು, ಎಸ್‌ಐಟಿ ಪೊಲೀಸರನ್ನು ಈ ಕುರಿತು ಪ್ರಶ್ನಿಸಿದ್ದಾರೆ. ಆದರೆ, ಪೊಲೀಸರು ಈ ಸಂಬಂಧ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಗೌರಿ ಹತ್ಯೆಯ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ತಂಡ, ಆರೋಪಿ ಗಣೇಶ್ ಮಸ್ಕಿಗೆ ಸೇರಿದ ಹುಬ್ಬಳ್ಳಿಯ ಫಾಕ್ಟರಿಯಲ್ಲಿ ತಲಾ 192 ಪುಟಗಳುಳ್ಳ ನೋಟ್ ಪುಸ್ತಕವನ್ನು ವಶಕ್ಕೆ ಪಡೆದಿದ್ದರು. ಸೆ. 7, 2017 ರಲ್ಲಿ ಪೊಲೀಸರು, ಆರೋಪಿ ತಾಯಿ ಮತ್ತು ಸಹೋದರ ರವಿ ಮಸ್ಕಿ ಸಮ್ಮುಖದಲ್ಲಿ ನೋಟ್ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಕೆಲ ಮೊಬೈಲ್ ಸಂಖ್ಯೆ ಬರೆದುಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಇದೀಗ ಆ ನೋಟ್ ಪುಸ್ತಕಗಳಲ್ಲಿ 92 ಮತ್ತು 87 ಪುಟ ಮಾತ್ರ ಉಳಿದಿವೆ. ಉಳಿದ ಪುಟ ಎಲ್ಲಿ ಎಂದು ಗಣೇಶ್ ಮಸ್ಕಿ ಪರ ವಕೀಲ ಪಿ.ಕೃಷ್ಣಮೂರ್ತಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹಾಜರಿದ್ದ ಪ್ರಕರಣದ ತನಿಕಾಧಿಕಾರಿ, ಹುಬ್ಬಳ್ಳಿ ಎಸಿಪಿ ಎನ್.ಬಿ.ಸಾಕ್ರಿ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಗೌರಿ ಲಂಕೇಶ್ ಅವರನ್ನು ಸೆ.5, 2017 ರಂದು ರಾಜರಾಜೇಶ್ವರಿ ನಗರದ ಅವರ ಮನೆ ಮುಂಭಾಗ ಇಬ್ಬರು ಬೈಕ್ ಸವಾರರು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದರು. ಶೂಟ್ ಮಾಡಿದ ಆರೋಪಿ ಎಂದು ಹೇಳಲಾದ ಪರುಶುರಾಮ್ ವಾಗ್ಮೋರೆ ಜತೆ ಗಣೇಶ್ ಮಸ್ಕಿ ಬೈಕ್ ಚಾಲನೆ ಮಾಡುತ್ತಿದ್ದ ಎಂಬ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.


Share It

You cannot copy content of this page