ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸಂತೋಷದ ಸುದ್ದಿ: ಫೆಬ್ರವರಿ–ಮಾರ್ಚ್ ಹಣ ಶೀಘ್ರದಲ್ಲೇ ಬಿಡುಗಡೆ

Share It

ಬೆಂಗಳೂರು: ಹಣಕಾಸು ಇಲಾಖೆಯಿಂದ ಅಧಿಕೃತ ಅನುಮೋದನೆ ಸಿಕ್ಕ ಕೂಡಲೇ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಅನುದಾನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದ್ದು, ಸದನದಲ್ಲಿಯೂ ಈ ಕುರಿತು ಉತ್ತರ ನೀಡಲಾಗಿದೆ ಎಂದು ಹೇಳಿದರು.

ಬಾಕಿ ಹಣವೂ ಖಾತೆಗೆ: ರೇಷನ್ ಕಾರ್ಡ್ ಅನರ್ಹತೆ ಕಾರಣದಿಂದ ಕೆಲ ಮಹಿಳೆಯರಿಗೆ ಹಣ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ನಂತರ ಅರ್ಹರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ಆಧಾರದಲ್ಲಿಯೇ ಗೃಹಲಕ್ಷ್ಮೀ ಯೋಜನೆಯ ಹಣ ವಿತರಿಸಲಾಗುತ್ತಿದೆ. ರೇಷನ್ ಕಾರ್ಡ್ ರದ್ದಾದ ಸಂದರ್ಭಗಳಲ್ಲಿ ಹಣ ಹೋಲ್ಡ್ ಆಗಿರಬಹುದು. ಆದರೆ ಫಲಾನುಭವಿಗಳು ತೆರಿಗೆ ಪಾವತಿದಾರರಾಗಿರದಿದ್ದರೆ ಅವರಿಗೆ ಯೋಜನೆಯ ಲಾಭ ಸಿಗಲಿದೆ ಎಂದು ಸಚಿವೆ ಸ್ಪಷ್ಟಪಡಿಸಿದರು.

ಗೃಹಲಕ್ಷ್ಮೀ ಸಹಕಾರ ಸಂಘದಿಂದ ಸಾಲ ಸೌಲಭ್ಯ: ಗೃಹಲಕ್ಷ್ಮೀ ಸಹಕಾರ ಸಂಘದ ಸದಸ್ಯರು ಪ್ರತಿ ತಿಂಗಳು 200 ರೂಪಾಯಿ ಉಳಿಸಿ, ಆರು ತಿಂಗಳ ನಂತರ ಸಾಲ ಪಡೆಯಲು ಅರ್ಹರಾಗುತ್ತಾರೆ. ನನ್ನ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ಅತಿಯಾದ ಷರತ್ತುಗಳಿಲ್ಲದೆ ಅರ್ಹರನ್ನು ಗುರುತಿಸಿ ಸಾಲ ನೀಡಲಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ವಿಮೆ ಸೌಲಭ್ಯ ನೀಡುವ ಯೋಚನೆಯೂ ಇದೆ ಎಂದು ಅವರು ತಿಳಿಸಿದರು.

ಅಕ್ಕಪಡೆ ಮೂಲಕ ಮಹಿಳೆಯರ ರಕ್ಷಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆ ಸಹಯೋಗದಲ್ಲಿ ‘ಅಕ್ಕಪಡೆ’ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಸಿಬ್ಬಂದಿ ನೇಮಕವಾಗಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಬಸ್ ನಿಲ್ದಾಣ, ದೇವಸ್ಥಾನ, ಮಾಲ್, ಉದ್ಯಾನವನಗಳಲ್ಲಿ ಅಕ್ಕಪಡೆ ಗಸ್ತು ತಿರುಗಲಿದೆ. ಶಾಲೆ–ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ದೂರು ನೀಡುವ ಮಹಿಳೆಯರ ಗುರುತು ಸಂಪೂರ್ಣವಾಗಿ ಗೌಪ್ಯವಾಗಿರಲಿದೆ ಎಂದು ಸಚಿವರು ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಅಕ್ಕಪಡೆ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಗೆ ಒಳಗಾದ ಮಹಿಳೆಯರು ಹಾಗೂ ಕುಟುಂಬ ಸಮಸ್ಯೆ ಎದುರಿಸುತ್ತಿರುವವರು ಕೂಡ ದೂರು ಸಲ್ಲಿಸಬಹುದು. ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರು ಯಾರು ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸರ್ಕಾರದ ನಿಲುವು ಎಂದರು.

ಇ-ಕೆವೈಸಿ ಕಡ್ಡಾಯ: ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯುವ ಮೊದಲು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು. ಜೊತೆಗೆ ರೇಷನ್ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರೂ ಇ-ಕೆವೈಸಿ ಪೂರ್ಣಗೊಳಿಸಬೇಕು. ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೂಡ ಕಡ್ಡಾಯವಾಗಿದೆ ಎಂದು ಸಚಿವೆ ಮನವಿ ಮಾಡಿದ್ದಾರೆ.


Share It

You May Have Missed

You cannot copy content of this page