ಬೆಳಗಾವಿ : ಬೆಳಗಾವಿ – ನವಿಮುಂಬೈ ನಡುವೆ ಇಂಡಿಗೋ ಸಂಸ್ಥೆಯು ನೂತನ ವಿಮಾನಯಾನ ಸೇವೆಯನ್ನು ಪ್ರಾರಂಭ ಮಾಡಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್ ಏರ್ ಸಂಸ್ಥೆಯು ಬೆಳಗಾವಿ-ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು.
ಈ ಹಿನ್ನಲೆಯಲ್ಲಿ, ಸಂಸದರು ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಬಜೆಟ್ ಅಧಿವೇಶನ ನಡೆದ ಸಮಯದಲ್ಲಿ ಭೇಟಿ ಮಾಡಿ ವಿನಂತಿಸಿದ್ದು ಇಲ್ಲಿ ಸ್ಮರಣೀಯ. ಅದಲ್ಲದೆ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸಹ ನವದೆಹಲಿಯಲ್ಲಿ ಸಭೆ ನಡೆಸಿ, ಬೆಳಗಾವಿಯಿಂದ ಮುಂಬೈ, ಚೆನ್ನೈ ಹಾಗೂ ಪುಣೆ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸಲು ಕೋರಿದ್ದರು.
ಇದಕ್ಕನುಗುಣವಾಗಿ 29 ನೇ ಮಾರ್ಚ್ 2026 ರಿಂದ ಬೆಳಗಾವಿ-ನವಿಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವನ್ನು ಪ್ರಾರಂಭಿಸಲಿದೆ.
ಇದು ನವಿ ಮುಂಬೈಯನ್ನು ಬೆಳಿಗ್ಗೆ 10:20 ಕ್ಕೆ ಬಿಟ್ಟು ಬೆಳಗಾವಿಯನ್ನು 11:35 ಕ್ಕೆ ತಲುಪಿ, ನಂತರ ಬೆಳಗಾವಿಯನ್ನು ಸಂಜೆ 17:35 ಕ್ಕೆ ಬಿಟ್ಟು ನವಿಮಂಬೈಯನ್ನು 18.45 ಕ್ಕೆ ತಲುಪುವುದು.
ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರಿಗೆ ಮತ್ತು ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

