ಬೆಂಗಳೂರು: ಪಿ.ಎಂ. ಅಜಯ್ ಯೋಜನೆಯಡಿ ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದಲ್ಲಿ ಉಚಿತ ಲಘು/ಭಾರಿ ವಾಹನ ಚಾಲನಾ ತರಬೇತಿ ಹಾಗೂ ಪರವಾನಗಿ ನೀಡಲು ಕೆಎಸ್ಆರ್ಟಿಸಿ ತೀರ್ಮಾನಿಸಿದೆ.
ಈಗಾಗಲೇ ಪರಿಶಿಷ್ಟ ಜಾತಿಯ 500 ಫಲಾನುಭವಿಗಳೀಗೆ ಭಾರಿ ವಾಹನ ಚಾಲನಾ ತರಬೇತಿ ಹಾಗೂ ಸಾರಿಗೆ ಇಲಾಖೆಯ ಪರವಾನಗಿ ನೀಡುವ ಕಾರ್ಯವು ನಿಗಮದ ತರಬೇತಿ ಕೇಂದ್ರಗಳಲ್ಲಿ ಪ್ರಗತಿಯಲ್ಲಿದ್ದು, ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೂ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.
ಇದೇ ಮಾದರಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೂ ಭಾರಿ ಹಾಗೂ ಲಘು ವಾಹನ ತರಬೇತಿ ನೀಡುವ ಜತೆಗೆ ಸಾರಿಗೆ ಇಲಾಖೆಯ ಪರವಾನಗಿ ನೀಡುವ ಪ್ರಕ್ರಿಯೆಗೆ ನಿರ್ದೇಶಕರು, ಅಲ್ಪಸಂಖ್ಯಾತ ನಿರ್ದೇಶನಾಲಯ ಅನುದಾನ ಒದಗಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಮತ್ತು ಚಾಲನಾ ಪರವಾನಗಿ ನೀಡುವ ಕಾರ್ಯಾಗಾರ ಏರ್ಪಡಿಸಲು ತೀರ್ಮಾನಿಸಲಾಗಿದೆ.
ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಹಾಗೂ ಪಾರ್ಸಿ ಸಮುದಾಯದ 18 ರಿಂದ ಮೇಲ್ಪಟ್ಟು, 45 ವರ್ಷದೊಳಗಿನ ಎಸ್ಎಸ್ಎಲ್ಸಿ ಉತ್ತೀರ್ಣರಾದ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಇವರಿಗೆ ಒಂದು ತಿಂಗಳು ಉಚಿತ ಊಟ ಮತ್ತು ವಸತಿ ನೀಡುವ ಜತೆಗೆ ತರಬೇತಿ ನೀಡಿ, ಉಚಿತವಾಗಿ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.
ತರಬೇತಿಯು ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಮತ್ತು ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮಾಲೂರು-7760990133/7019637406, ಮಳವಳ್ಳಿ-7760990277,7619343405, 9663266889, ಹಾಸನ-8904045818,9686684655 ಚಿಕ್ಕಮಗಳೂರು-9902863142, 7349103222 ಮತ್ತು ಹೊಳಲ್ಕೆರೆ-7019072560, 9740027655 ಸಂಪರ್ಕಿಸಬಹುದು.

