ಬೆಂಗಳೂರು: ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಮಣಿದಿರುವ ಸರಕಾರ ಇನ್ನೊಂದು ತಿಂಗಳಲ್ಲಿ ೫೬ ಸಾವಿರ ಹುದ್ದೆಗಳ ಭರ್ತಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿರುವ ಸರಕಾರ, 2021 ರ ಅಧಿಸೂಚನೆಯಂತೆ ಶೇ.50 ರಷ್ಟು ಮೀಸಲಾತಿ ಪ್ರಮಾಣ ಮೀರದಂತೆ ಹುದ್ದೆಗಳ ಭರ್ತಿಗೆ ತೀರ್ಮಾನಿಸಿದೆ. ಒಳ ಮೀಸಲಾತಿ ಸಂಬAಧ ನ್ಯಾಯಾಲಯ ತೀರ್ಮಾನದಂತೆ ನಿರ್ಧಾರವನ್ನು ಕಾಯ್ದಿರಿಸಿ, ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಅದರನ್ವಯ ನೇಮಕ ನಡೆಸಲು ಸಮಸ್ಯೆಯಿಲ್ಲ. ಆದರೆ, ಶೇ.2ರಷ್ಟು ಎಸ್‌ಸಿ ಮತ್ತು ಶೇ.4 ರಷ್ಟು ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಕಾನೂನಿನ ತೊಡಕಿಗೆ ಒಳಗಾಗಿದೆ. ಇದನ್ನು ನ್ಯಾಯಾಲಯದ ತೀರ್ಪಿನವರೆಗೆ ಕಾಯ್ದಿರಿಸಿ, ಶೇ.೫೦ರ ಮೀಸಲಾತಿ ಪ್ರಮಾಣದಂತೆಯೇ ನೇಮಕಾತಿ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಒಂದು ತಿಂಗಳಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲು ಆಯಾಯ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಸಹಕಾರ ನೀಡುವಂತೆ ಹಣಕಾಸು ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ, ಶೀಘ್ರವೇ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿವರಿಸಿದ್ದಾರೆ.

