ಹೈನುಗಾರರಿಕೆಗೆ ಸರ್ಕಾರದ ನೆರವು: ಉಚಿತ ಪೌಷ್ಟಿಕ ಮೇವಿನ ಬೀಜ ಕಿಟ್‌ ವಿತರಣೆ: ಹಾಲು ಉತ್ಪಾದನೆಗೆ ಉತ್ತೇಜನ

Share It

ಕರ್ನಾಟಕದಲ್ಲಿ ಹೈನುಗಾರಿಕೆ ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರೈತರಿಗೆ ಉಚಿತವಾಗಿ ಸುಧಾರಿತ ಮೇವಿನ ಬೀಜಗಳ ಕಿರು ಕಿಟ್‌ಗಳನ್ನು ವಿತರಿಸುವ ಯೋಜನೆ ಅನುಷ್ಠಾನಗೊಳಿಸಿದೆ.

ಜಾನುವಾರುಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಅವುಗಳ ಆರೋಗ್ಯ ಉತ್ತಮಪಡಿಸಿ, ಹಾಲಿನ ಇಳುವರಿ ಹೆಚ್ಚಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ. ವಿಶೇಷವಾಗಿ ಮಹಿಳಾ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನೀಡಲಾಗಿದೆ. ಅರ್ಹ ರೈತರು ತಮ್ಮ ಸಮೀಪದ ಪಶು ಆಸ್ಪತ್ರೆ ಅಥವಾ ಪಶುಸಂಗೋಪನೆ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಜಾನುವಾರುಗಳ ಆರೋಗ್ಯ ಹಾಗೂ ಹೈನುಗಾರಿಕೆ ಲಾಭವು ಅವುಗಳಿಗೆ ನೀಡುವ ಆಹಾರದ ಗುಣಮಟ್ಟದ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಆದರೆ, ಮಾರುಕಟ್ಟೆಯಿಂದ ಮೇವು ಖರೀದಿಸುವುದು ಅನೇಕ ರೈತರಿಗೆ ದುಬಾರಿಯಾಗುತ್ತಿದೆ. ಈ ಹಿನ್ನೆಲೆ, ರೈತರು ತಮ್ಮದೇ ಹೊಲಗಳಲ್ಲಿ ಉತ್ತಮ ಗುಣಮಟ್ಟದ ಹಸಿರು ಮೇವನ್ನು ಬೆಳೆಯಲು ಸಹಾಯವಾಗುವಂತೆ ಸರ್ಕಾರ ಉಚಿತವಾಗಿ ಮೇವಿನ ಬೀಜಗಳನ್ನು ವಿತರಿಸಲು ಮುಂದಾಗಿದೆ.

ಮೇವಿನ ಕಿರು ಕಿಟ್ ವಿತರಣೆ ಯೋಜನೆ ಎಂದರೇನು?

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೂಲಕ ಜಾರಿಗೆ ಬಂದಿರುವ ಈ ಯೋಜನೆಯಡಿ, ಹೈನುಗಾರಿಕೆ ನಡೆಸುವ ರೈತರಿಗೆ ಸುಧಾರಿತ ತಳಿಗಳ ಮೇವಿನ ಬೀಜಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ. ಜಾನುವಾರುಗಳಿಗೆ ಅಗತ್ಯ ಪೌಷ್ಟಿಕಾಂಶ ಹೆಚ್ಚಿಸಿ ಹಾಲಿನ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು ಇದರ ಉದ್ದೇಶ. ಖಾರಿಫ್ ಮತ್ತು ರಬಿ ಹಂಗಾಮುಗಳಲ್ಲಿ ವಿವಿಧ ಮೇವಿನ ತಳಿಗಳ ಬೀಜಗಳನ್ನು ವಿತರಿಸಲಾಗುತ್ತದೆ. ಒಂದು ಬಾರಿ ಸೌಲಭ್ಯ ಪಡೆದ ರೈತರು, ಒಂದು ವರ್ಷದ ಬಳಿಕ ಮತ್ತೆ ಅರ್ಜಿ ಹಾಕಬಹುದು.

ಯೋಜನೆಯ ಪ್ರಮುಖ ಉದ್ದೇಶಗಳು

ಉತ್ತಮ ಗುಣಮಟ್ಟದ ಮೇವು: ರೈತರು ತಮ್ಮ ಜಮೀನಿನಲ್ಲೇ ಪೌಷ್ಟಿಕ ಹಸಿರು ಮೇವನ್ನು ಬೆಳೆಸಲು ಪ್ರೋತ್ಸಾಹ.

ಜಾನುವಾರುಗಳ ಆರೋಗ್ಯ ಸುಧಾರಣೆ: ಪೌಷ್ಟಿಕ ಆಹಾರದಿಂದ ಜಾನುವಾರುಗಳ ರೋಗ ನಿರೋಧಕ ಶಕ್ತಿ ಹಾಗೂ ಹಾಲಿನ ಇಳುವರಿ ಹೆಚ್ಚಳ.

ವೆಚ್ಚದಲ್ಲಿ ಇಳಿಕೆ: ಹೊರಗಿನಿಂದ ಪಶು ಆಹಾರ ಖರೀದಿಸುವ ಅವಶ್ಯಕತೆ ಕಡಿಮೆಯಾಗುವುದರಿಂದ ರೈತರ ಖರ್ಚು ತಗ್ಗುವುದು.

ಸ್ವಾವಲಂಬನೆ: ಮೇವಿನ ಉತ್ಪಾದನೆಯಲ್ಲಿ ರೈತರು ಆತ್ಮನಿರ್ಭರರಾಗುವಂತೆ ಮಾಡುವುದು.

ವಿತರಿಸಲ್ಪಡುವ ಮೇವಿನ ಬೀಜಗಳು

ಈ ಯೋಜನೆಯಡಿ 1 ರಿಂದ 5 ಕೆಜಿ ವರೆಗೆ ಮೇವಿನ ಬೀಜಗಳ ಕಿಟ್‌ಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ:

  • ಆಫ್ರಿಕನ್ ಟಾಲ್ ಮೆಕ್ಕೆಜೋಳ
  • ಲುಸರ್ನ್ (ಕುದುರೆ ಮಸಾಲೆ)
  • ಬರ್ಸೀಮ್
  • ಜೋಳ
  • ಓಟ್ಸ್
  • ಚೈನೀಸ್ ಕ್ಯಾಬೇಜ್ ಹಾಗೂ ಕಾಂಗೋ ಸಿಗ್ನಲ್ ಹುಲ್ಲು ಮೀಸಲಾತಿ ಮತ್ತು ಆದ್ಯತೆ

ಮಹಿಳಾ ರೈತರಿಗೆ: ಒಟ್ಟು ಫಲಾನುಭವಿಗಳಲ್ಲಿ 30% ಮೀಸಲಾತಿ.

ಪರಿಶಿಷ್ಟ ಜಾತಿ: 16% ಮೀಸಲಾತಿ.

ಪರಿಶಿಷ್ಟ ಪಂಗಡ: 7% ಮೀಸಲಾತಿ.

ಅಲ್ಪಸಂಖ್ಯಾತರು ಮತ್ತು ಇತರರು: ಸರ್ಕಾರದ ನಿಯಮಾನುಸಾರ ಆದ್ಯತೆ.
ಸಮಾಜದ ಎಲ್ಲಾ ವರ್ಗದ ಅರ್ಹ ರೈತರಿಗೆ ಯೋಜನೆಯ ಪ್ರಯೋಜನ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಅರ್ಹತಾ ನಿಯಮಗಳು:

  • ಅರ್ಜಿದಾರರು ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಯಾಗಿರಬೇಕು.
  • ಮೇವು ಬೆಳೆಯಲು ಅನುಕೂಲವಾಗುವಂತೆ ಸ್ವಂತ ಕೃಷಿ ಭೂಮಿ ಇರಬೇಕು.
  • ಕನಿಷ್ಠ ಎರಡು ಜಾನುವಾರುಗಳನ್ನು (ಹಸು ಅಥವಾ ಎಮ್ಮೆ) ಸಾಕುತ್ತಿರುವವರಿಗೆ ಆದ್ಯತೆ.
  • ಒಂದು ಬಾರಿ ಕಿಟ್ ಪಡೆದ ನಂತರ ಒಂದು ವರ್ಷ ಕಳೆದ ಬಳಿಕವೇ ಮರುಅರ್ಜಿಗೆ ಅವಕಾಶ.
  • ಭೂ ದಾಖಲೆಗಳು ಹಾಗೂ ಜಾನುವಾರುಗಳ ವಿವರಗಳನ್ನು ಪರಿಶೀಲನೆಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ
  1. ಸಮೀಪದ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಅಥವಾ ತಾಲ್ಲೂಕು ಪಶುಸಂಗೋಪನೆ ಕಚೇರಿಗೆ ಭೇಟಿ ನೀಡಿ.
  2. ‘ಮೇವಿನ ಕಿರು ಕಿಟ್ ವಿತರಣೆ’ ಯೋಜನೆಯ ಅರ್ಜಿ ನಮೂನೆಯನ್ನು ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿ.
  3. ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮೊದಲಾದ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಿ.
  4. ಅಧಿಕಾರಿಗಳ ಪರಿಶೀಲನೆಯ ನಂತರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
  5. ಖಾರಿಫ್ ಅಥವಾ ರಬಿ ಹಂಗಾಮಿಗೆ ಅನುಗುಣವಾಗಿ ಮೇವಿನ ಬೀಜಗಳ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಅಗತ್ಯ ದಾಖಲೆಗಳು:

    • ಆಧಾರ್ ಕಾರ್ಡ್
    • ಜಮೀನಿನ ದಾಖಲೆ (ಪಹಣಿ)
    • ಜಾತಿ ಹಾಗೂ ಆದಾಯ ಪ್ರಮಾಣಪತ್ರ (ಅನ್ವಯವಾಗುವವರಿಗೆ)
    • ರೇಷನ್ ಕಾರ್ಡ್ (ಇದ್ದರೆ)
    • ಬ್ಯಾಂಕ್ ಪಾಸ್‌ಬುಕ್ ವಿವರಗಳು
    • ಇತ್ತೀಚಿನ ಫೋಟೋ

    ಈ ಯೋಜನೆಯ ಮೂಲಕ ರೈತರು ಹೈನುಗಾರಿಕೆಯಲ್ಲಿ ಉತ್ತಮ ಲಾಭ ಪಡೆಯಲು ಹಾಗೂ ಜಾನುವಾರುಗಳ ಆರೈಕೆಯನ್ನು ಸುಧಾರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.


    Share It

    You May Have Missed

    You cannot copy content of this page