ಕ್ರೀಡೆ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳಿಗೆ ಸರ್ಕಾರದ ಗ್ರೀನ್ ಸಿಗ್ನಲ್; ಆದರೂ RCB ಯಾಕೆ ಹಿಂದೆ ಸರಿಯುತ್ತಿದೆ? – ವೆಂಕಟೇಶ್ ಪ್ರಸಾದ್ ಪ್ರಶ್ನೆ

Share It

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಸಂತಸದ ವಿಚಾರ. ಆದರೆ ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಲ್ಲಿ ಪಂದ್ಯಗಳನ್ನು ಆಡಲು ಹಿಂಜರಿಯುತ್ತಿರುವುದು ಅಚ್ಚರಿ ತಂದಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 45 ದಿನಗಳಿಂದ ನಾವು ನಿರಂತರವಾಗಿ ಶ್ರಮಪಟ್ಟಿದ್ದೇವೆ. ಸರ್ಕಾರ ರಚಿಸಿದ್ದ ಸಮಿತಿ ಸೂಚಿಸಿದ ಎಲ್ಲ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿದೆ. ಐಪಿಎಲ್ ಜೊತೆಗೆ ಅಂತರರಾಷ್ಟ್ರೀಯ ಪಂದ್ಯಗಳಿಗೂ ಸರ್ಕಾರದಿಂದ ಷರತ್ತುಬದ್ಧ ಅನುಮತಿ ದೊರೆತಿದೆ” ಎಂದು ಹೇಳಿದರು.

ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕ್ರೀಡಾಂಗಣವನ್ನು ಬಿಸಿಸಿಐಗೆ ಹಸ್ತಾಂತರಿಸುವ ಗುರಿಯಿದೆ. ಅದರ ಬಳಿಕ RCB ತನ್ನ ಎಲ್ಲಾ ಹೋಮ್ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಸಬೇಕು ಎಂಬುದು ನಮ್ಮ ಮನವಿ ಎಂದು ವೆಂಕಟೇಶ್ ಪ್ರಸಾದ್ ಸ್ಪಷ್ಟಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಮರಳಿ ತರಲು KSCA ಹರಸಾಹಸ ಪಡುತ್ತಿದ್ದರೂ, ಕೆಲವರಿಂದ ಅನಗತ್ಯ ತಡೆ ಎದುರಾಗುತ್ತಿದೆ ಎಂಬ ಆರೋಪವನ್ನೂ ಅವರು ಈ ಸಂದರ್ಭದಲ್ಲಿ ಮಾಡಿದರು. “ಎಲ್ಲಾ ಇಲಾಖೆಗಳ ನಿಯಮಗಳನ್ನು ಅನುಷ್ಠಾನಗೊಳಿಸಿದ್ದೇವೆ. ಆದರೂ ಕೆಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.

ಈ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಅವರು ಧನ್ಯವಾದ ಅರ್ಪಿಸಿದರು. ಸರ್ಕಾರದ ಜೊತೆಗೆ ಬಿಸಿಸಿಐಯೊಂದಿಗೂ ನಿರಂತರ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

RCB ಹಾಲಿ ಚಾಂಪಿಯನ್ ಆಗಿರುವ ಹಿನ್ನೆಲೆಯಲ್ಲಿ, ಹೋಮ್ ಗ್ರೌಂಡ್‌ನಲ್ಲಿ ಉದ್ಘಾಟನಾ ಪಂದ್ಯ ಹಾಗೂ ಆರಂಭಿಕ ಸಮಾರಂಭ ನಡೆಯಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು. “ಇದು ಬಿಸಿಸಿಐಗೂ ಬೇಕಾದ ವಿಷಯವೇ. RCB ಗೆ ಅನುಕೂಲವಾಗಲೆಂದೇ ನಾವು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಆದರೆ ಈಗ ಅವರೇ ಮುಂದಾಗುತ್ತಿಲ್ಲ. ಮುಂದಿನ 15 ದಿನಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ನಾವು ಕಾಯುತ್ತೇವೆ” ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.


Share It

You cannot copy content of this page