ಜೈಪುರ: 11 ವರ್ಷದಿಂದ ಹುತಾತ್ಮ ಯೋಧನ ಪತ್ನಿಗೆ ಭೂಮಿ ನೀಡದೆ ಸತಾಯಿಸುತ್ತಿರುವ ರಾಜಸ್ಥಾನ ಸರಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ನಾಲ್ಕು ವಾರಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಅವರು, ಪ್ರಧಾನ ಕಾರ್ಯದರ್ಶಿ ಅವರಿಗೆ ಈ ವಿಷಯವನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಪಡಿಸುವಂಥೆ ಸೂಚಿಸಿದ್ದಾರೆ. ಈ ಕುರಿತು ಮೇ. ೫ರೊಳಗೆ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಹುತಾತ್ಮ ಯೋಧ ಭನ್ವರ್ ಸಿಂಗ್ ಪತ್ನಿ ದರ್ಯಾವೋ ಕನ್ವರ್ ಅವರಿಗೆ ಜೈಪುರದ ಫುಲೇರಾ ತಹಸೀಲ್ ವ್ಯಾಪ್ತಿಯಲ್ಲಿ ಭೂಮಿ ನೀಡಲಾಗಿತ್ತು. ಆದರೆ, ಆ ಭೂಮಿ ನದಿಪಾತ್ರದಲ್ಲಿದ್ದು, ಇದು ಕೃಷಿಗೆ ಸೂಕ್ತವಲ್ಲ ಎಂದು ಹೇಳಲಾಗಿದ್ದು, ಇದಕ್ಕೆ ಸಂಬAಧಿಸಿ ರಾಜ್ಯದ ಕಂದಾಯ ಮಂಡಳಿ ಬೇರೆ ಸೂಕ್ತ ಭೂಮಿ ನೀಡುವಂತೆ ಆದೇಶ ನೀಡಿತ್ತು.
ಈ ಆದೇಶ ಪ್ರಕಟವಾಗಿ 11 ವರ್ಷ ಕಳೆದರೂ ರಾಜಸ್ಥಾನ ಸರಕಾರ ವಿಧವೆಗೆ ಭೂ ಮಂಜೂರಾತಿ ಮಾಡಿರಲಿಲ್ಲ. ಹೀಗಾಗಿ, 2022 ರಲ್ಲಿ ಮಹಿಳೆ ರಾಜಸ್ಥಾನ ಹೈಕೋರ್ಟ್ ಬಾಗಿಲು ತಟ್ಟಿದ್ದರು. ಅವರ ಪರವಾಗಿ ವಕೀಲ ಒ.ಪಿ ಮಿಶ್ರಾ ವಾದ ಮಂಡನೆ ಮಾಡಿದ್ದರು.