ರಾಜಕೀಯ ಸುದ್ದಿ

ಸರ್ಕಾರದ ಯೋಜನೆಗಳಿಗೆ ರಾಜ್ಯಪಾಲರಿಂದ ಶ್ಲಾಘನೆ: ಅಭಿವೃದ್ಧಿ ಪಥದಲ್ಲಿ ಕರ್ನಾಟಕ

Share It

ಬೆಂಗಳೂರು: ರಾಜ್ಯವನ್ನು ನವೋದ್ಯಮಗಳ ಕೇಂದ್ರವಾಗಿ ರೂಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ನೀತಿಗಳು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಬಲ ನೀಡುವ ಕಾರ್ಯಕ್ರಮಗಳು, ಪಂಚ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಠಾನ ಹಾಗೂ ಉತ್ತಮ ಕಾನೂನು–ಸುವ್ಯವಸ್ಥೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

77ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ಆಯೋಜಿಸಿದ್ದ ಅಧಿಕೃತ ಸಮಾರಂಭದಲ್ಲಿ ರಾಜ್ಯಕ್ಕೆ ಸಂದೇಶ ನೀಡಿದ ಅವರು, ಸಂವಿಧಾನದ ಆಶಯದಂತೆ ಜನಸಾಮಾನ್ಯರ ಸಬಲೀಕರಣಕ್ಕೆ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ 1.13 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, 2025–26ನೇ ಸಾಲಿನ ಬಜೆಟ್‌ನಲ್ಲಿ 83,200 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮೀಸಲಾಗಿದೆ ಎಂದು ವಿವರಿಸಿದರು. ಜೊತೆಗೆ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆಯಿಂದ ಹೂಡಿಕೆ ಹೆಚ್ಚಳ: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ವಿದೇಶಿ ಹೂಡಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. 2025ರ ‘ಇಂಡಿಯಾ ಜಸ್ಟಿಸ್‌ ರಿಪೋರ್ಟ್‌’ ಪ್ರಕಾರ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ರಾಜ್ಯದ ಸಾಧನೆಗೆ ಸಾಕ್ಷಿಯಾಗಿದೆ. ಆಹಾರ ಕಲಬೆರಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಡ್ರಗ್ಸ್‌ ಹಾಗೂ ಮಾದಕ ವಸ್ತು ಮಾಫಿಯಾದ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ನವೋದ್ಯಮ ಮತ್ತು ಉದ್ಯೋಗ ಸೃಷ್ಟಿ ಗುರಿ: ಕರ್ನಾಟಕ ನವೋದ್ಯಮ ನೀತಿಯ ಮೂಲಕ ರಾಜ್ಯವನ್ನು ಸ್ಟಾರ್ಟ್‌ಅಪ್‌ ಹಬ್‌ ಆಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನ ಹೊರಗೂ ತಂತ್ರಜ್ಞಾನ ವಿಸ್ತರಣೆಗಾಗಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮಕ್ಕೆ 1,000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈ ಎಲ್ಲ ಕ್ರಮಗಳಿಂದ ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ರೈತರಿಗೆ ನೆರವು: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ಏಳು ಗಂಟೆಗಳ ವಿದ್ಯುತ್‌ ಪೂರೈಕೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಕಬ್ಬು ಕಟಾವು ಯಂತ್ರಗಳಿಗೆ ಪ್ರೋತ್ಸಾಹ ಧನ, ರಾಗಿ, ಭತ್ತ, ಮೆಕ್ಕಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಕೃಷಿ ಯಂತ್ರೋಪಕರಣ ಯೋಜನೆಯಡಿ ನೆರವು ಒದಗಿಸಲಾಗಿದೆ. ಒಟ್ಟಾರೆ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಬ್ಸಿಡಿ ಹಾಗೂ ಇತರ ನೆರವಿನ ರೂಪದಲ್ಲಿ ರೈತರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಒಕ್ಕೂಟ ವ್ಯವಸ್ಥೆ ಸಂರಕ್ಷಣೆ ಅಗತ್ಯ: ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಆಶಯ. ಅದಕ್ಕಾಗಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ರಾಜ್ಯಪಾಲರು ಹೇಳಿದರು. ಸಂವಿಧಾನವು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆಯನ್ನು ಸಮತೋಲನದಿಂದ ರೂಪಿಸಿದ್ದು, ದೇಶದ ಏಕತೆ ಮತ್ತು ವೈವಿಧ್ಯತೆಯನ್ನು ರಕ್ಷಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಸಚಿವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಟೀಕೆ ಇಲ್ಲ: ಇತ್ತೀಚಿನ ಜಂಟಿ ಅಧಿವೇಶನದ ಬಳಿಕ ರಾಜ್ಯಪಾಲರ ಗಣರಾಜ್ಯೋತ್ಸವ ಭಾಷಣದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಅಥವಾ ಮನರೇಗಾ ಯೋಜನೆಗೆ ಸಂಬಂಧಿಸಿದ ವಿವಾದಾತ್ಮಕ ಉಲ್ಲೇಖಗಳಿಲ್ಲದೆ, ಸಂಪೂರ್ಣವಾಗಿ ಅಭಿವೃದ್ಧಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಕುರಿತು ಮಾತ್ರ ಗಮನ ಹರಿಸಲಾಗಿದೆ.


Share It

You cannot copy content of this page