ಬೆಂಗಳೂರು: ಖಾಸಗಿ ಪದವಿ ಕಾಲೇಜುಗಳಲ್ಲಿಯೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳ ಮಾದರಿಯಲ್ಲಿ ಸರಕಾರಿ ಖೋಟಾದಡಿ ಶಿಕ್ಷಣ ನೀಡುವ ಮಹತ್ವದ ನಿರ್ಧಾರಕ್ಕೆ ಸರಕಾರ ಮುಂದಾಗಿದೆ.
ಉನ್ನತ ಶಿಕ್ಷಣ ಇಲಾಖೆ ಇಂತಹದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಖಾಸಗಿ ಕಾಲೇಜುಗಳ ಒಕ್ಕೂಟ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ 2025-26 ನೇ ಸಾಲಿನಿಂದ ಸರಕಾರಿ ಖೋಟಾದ ವ್ಯವಸ್ಥೆ ಜಾರಿಗೆ ಬರಲಿದೆ.
ಖಾಸಗಿ ಕಾಲೇಜುಗಳು ಶೇ. 100 ಸೀಟುಗಳನ್ನು ಮ್ಯಾನೇಜ್ಮೆಂಟ್ ಖೋಟಾದ ಅಡಿಯಲ್ಲಿ ಭರ್ತಿ ಮಾಡುತ್ತಿದ್ದವು. ಇನ್ಮುಂದೆ ಶೇ. 40 ಸೀಟುಗಳನ್ನು ಸರಕಾರಿ ಖೋಟಾದಡಿ ಭರ್ತಿ ಮಾಡುವಂತೆ ಸರಕಾರ ಆದೇಶ ನೀಡಿದೆ. ಆಯ್ಕೆಗಾಗಿ ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಹ ತೀರ್ಮಾನಿಸಲಾಗಿದೆ.
ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡಲು ಹಣಕಾಸಿನ ಕೊರತೆ ಅನುಭವಿಸಿ, ಪಿಯುಸಿಯಲ್ಲಿಯೇ ಶಿಕ್ಷಣವನ್ನು ಮೊಟುಕುಗೊಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಇಂತಹದ್ದೊAದು ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪದವಿ ಕನಸು ನನಸಾಗಲಿದೆ.
ಕೆಲವು ಕಾಲೇಜುಗಳಲ್ಲಿ ಈಗಾಗಲೇ ಸೀಟುಗಳ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ನಿಯಮ ಜಾರಿಗೆ ಕೆಲವರು ಕಾಲಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಸರಕಾರಿ ಕೋಟಾದ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ. ಇದಕ್ಕಾಗಿ, ಸಿಇಟಿ ಮತ್ತು ಕಾಮೆಡ್-ಕೆ ಮಾದರಿಯ ಪರೀಕ್ಷೆ ನಡೆಯಲಿದೆ.

ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ