ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ಗ್ಯಾರಂಟಿ ಪಡೆದು ಮತ ಹಾಕಿಲ್ಲ, ಹೀಗಾಗಿ, ಗ್ಯಾರಂಟಿ ನಿಲ್ಲಿಸಬೇಕು ಎಂಬ ಹೇಳಿಕೆಗಳಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ನಿಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ತಿರುಗೇಟು ನೀಡಿರುವ ಅವರು, ನಮ್ಮ ಸರಕಾರ ಗ್ಯಾರಂಟಿಗಳ ಜಾರಿ ಮಾಡಿರುವುದು ರಾಜ್ಯದ ಬಡವರ ಹಿತಕ್ಕಾಗಿಯೇ ಹೊರತು, ಮತಕ್ಕಾಗಿ ಅಲ್ಲ, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯೂ ಸೇರಿ ಯಾವುದೇ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಾವು ಕಳೆದ ಬಾರಿಗಿಂತ ಎಂಟು ಸ್ಥಾನ ಹೆಚ್ವು ಗೆದ್ದಿದ್ದೇವೆ. ಕೆಲವೊಂದು ಭಾಗಗಳಲ್ಲಿ ನಮಗೆ ಬೇರೆ ಬೇರೆ ಕಾರಣದಿಂದ ಹಿನ್ನಡೆಯಾಗಿದೆ. ಗ್ಯಾರಂಟಿಗಳಿಂದ ರಾಜ್ಯದ ಜನ ನೆಮ್ಮದಿಯ ಜೀವನ ಮಾಡುವಂತಾಗಿದೆ. ಅದೆಷ್ಟೋ ಮಹಿಳೆಯರು ತಮ್ಮ ಜೀವನವನ್ನು ನಮ್ಮ ಗ್ಯಾರಂಟಿಗಳ ಮೂಲಕವೇ ಕಂಡುಕೊಂಡಿದ್ದಾರೆ. ಹೀಗಾಗಿ, ಇದು ಜನಹಿತದ ಕಾರ್ಯಕ್ರಮವೇ ಹೊರತು ಮತ ಪಡೆಯುವ ಕಾರ್ಯಕ್ರಮಗಳಲ್ಲ ಎಂದಿದ್ದಾರೆ.
ಮೈಸೂರು ಪರಾಜಿತ ಅಭ್ಯರ್ಥಿ ಲಕ್ಷ್ಮಣ್, ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ ಕೆಲವು ಶಾಸಕರು, ರಾಜ್ಯದ ಜನ ಗ್ಯಾರಂಟಿ ಬೇಡ ಎಂಬಂತೆ ಮತ ಚಲಾವಣೆ ಮಾಡಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿಗಳಂತಹ ಕಾರ್ಯಕ್ರಮ ಬೇಕಿಲ್ಲ, ಬರೀ ಆಶ್ವಾಸನೆ ಮತ್ತು ಭಾವನಾತ್ಮಕ ಭಾಷಣಗಳು ಹೆಚ್ಚಾಗಿವೆ. ಹೀಗಾಗಿ, ಗ್ಯಾರಂಟಿ ನಿಲ್ಲಿಸಬೇಕು ಎಂದಿದ್ದಾರೆ. ಆದರೆ, ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಅನೇಕ ಸಚಿವರು ಅದನ್ನು ಅಲ್ಲಗಳೆದಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

