ಹಾವೇರಿ: ನಿಂತಿದ್ದ ಲಾರಿಗೆ ಟಿಟಿ ಗಾಡಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ 13 ಜನರು ಸಆವನ್ನಪ್ಪಿರುವ ಧಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಅಷ್ಟು ಜನರು ಶಿವಮೊಗ್ಗ ಜಿಲ್ಲೆ ಭದ್ರಾವತಿ ಎಮ್ಮೆಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದ್ದು, ಘಟನೆಯ ಸುದ್ದಿ ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ನಾಗೇಶ್ ಎಂಬುವವರ ಟಿಟಿ ಗಾಡಿಯಲ್ಲಿ 17 ಜನರ ತಂಡ ತೆರಳಿತ್ತು. ಇತ್ತೀಚೆಗೆ ಟಿಟಿ ಗಾಡಿ ಖರೀದಿ ಮಾಡಿದ್ದರಿಂದ ಮಾಯಕ್ಕ ದೇವಸ್ಥಾನಕ್ಕೆ ನಾಗೇಶ್ ಕುಟುಂಬ ಮತ್ತು ಸಂಬಂಧಿಕರು ತೆರಳಿದ್ದರು.
ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಘಟನೆ ನಡೆದಿದ್ದು, ಟಿಟಿಗಾಡಿಯಲ್ಲಿದ್ದ ೧೭ ಜನರ ಪೈಕಿ ೧೩ ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಮತ್ತು ಮೃತದೇಹಗಳನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಬಳಿ ಮೃತರ ಸಂಬAಧಿಕರ ರೋಧನೆ ಮುಗಿಲುಮುಟ್ಟಿದೆ.
ಮೃತದೇಹ ಹೊರತೆಗೆಯಲು ಹರಸಾಹಸ: ಶುಕ್ರವಾರ ಬೆಳಗಿನ ಜಾವ ನಾಲ್ಕೂವರೆ ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ನಿದ್ರೆಯ ಮಂಪರಿನಲ್ಲಿದ್ದವರೆಲ್ಲ ಇಹಲೋಕ ತ್ಯಜಿಸಿದ್ದಾರೆ. ಟಿಟಿ ಗಾಡಿ ಮಾಲೀಕ ನಾಗೇಶ್ ಪುತ್ರ ಆದರ್ಶ ವಾಹನೆ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ನಾಗೇಶ್ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ವಾಹನದಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಹುತೇಕರ ದೇಹಗಳು ಛಿದ್ರಛಿದ್ರವಾಗಿವೆ. ಸಿಬ್ಬಂದಿ ಮೃತದೇಹಗಳನ್ನು ಹೊರೆತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.
ಮೃತರನ್ನು ಪರಶುರಾಮ್ (45 ವರ್ಷ), ಭಾಗ್ಯ (40 ವರ್ಷ), ನಾಗೇಶ್ (50 ವರ್ಷ), ವಿಶಾಲಾಕ್ಷಿ (40 ವರ್ಷ), ಅರ್ಪಿತಾ (18 ವರ್ಷ), ಸುಭದ್ರಾಬಾಯಿ (65 ವರ್ಷ), ಪುಣ್ಯ (50 ವರ್ಷ), ಮಂಜುಳುಬಾಯಿ (62 ವರ್ಷ), ಆದರ್ಶ (23 ವರ್ಷ), ಮಾನಸ (24 ವರ್ಷ), ರೂಪಾ (40 ವರ್ಷ), ಮಂಜುಳಾ (50 ವರ್ಷ) ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಮೃತಪಟ್ಟವರೆಲ್ಲ ಶಿವಮೊಗ್ಗ ಮೂಲದವರು. ನಾಲ್ವರು ಆಸ್ಪತ್ರೆಯಲ್ಲಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಕಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.

- ರಘುನಂದನ್ ಮೂರ್ತಿ, ಹಾವೇರಿ ಜಿಲ್ಲಾಧಿಕಾರಿ

