ಹಾವೇರಿ: ನಿಲುಗಡೆ ಬಂದ ಸಾರಿಗೆ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ ಮೇಲೆ ಹತ್ತಿ, ಅಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದು 2 ವರ್ಷದ ಬಾಲಕ ಸಾವನ್ನಪ್ಪಿ, ಇತರ ಮೂವರು ಗಾಯಗೊಂಡಿ ಘಟನೆ ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಬಸ್ ಡಿಕ್ಕಿಯಾಗಿ ಗಾಯಗೊಂಡ ಎರಡು ವರ್ಷದ ಮಗು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಮೃತಪಟ್ಟ ಮಗುವನ್ನು ಸವಣೂರು ಪಟ್ಟಣದ ಹಜರತ್ ಅಲಿ ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರು ಗಾಯಾಳುಗಳಾದ ವಾಸುದೇವ (44), ಹರ್ಷಾ (6) ಹಾಗೂ ಕಾವ್ಯಾಂಜಲಿ (39) ಎಂಬವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಬಂಕಾಪುರ ಪಟ್ಟಣದ ನಿವಾಸಿಗಳು.
ನಿಲ್ದಾಣದಲ್ಲಿ ಜನರು ಬಸ್ಗಳಿಗಾಗಿ ಕಾಯುತ್ತಿದ್ದ ವೇಳೆ, ಹಾವೇರಿ-ಲಕ್ಷ್ಮೇಶ್ವರ ಬಸ್ ಬಂದಿದ್ದು, ಅಪಘಾತದ ಅರಿವಿಲ್ಲದ ಜನರು ಪ್ಲಾಟ್ಫಾರ್ಮ್ ಮೇಲೆ ನಿಂತು ಬಸ್ ಬೋರ್ಡ್ ನೋಡುತ್ತಿದ್ದರು. ಆದರೆ, ವೇಗವಾಗಿ ಬಂದ ಬಸ್, ನಿಲುಗಡೆಯಾಗದೆ ಪ್ಲಾಟ್ಫಾರ್ಮ್ ಮೇಲೆ ನುಗ್ಗಿದೆ. ಇದರಿಂದ ಅಲ್ಲಿದ್ದ ಜನ ಬಸ್ ಎದುರುಗಡೆ ಸಿಲುಕಿದ್ದಾರೆ. ಘಟನೆ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಗೆ ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆ ಕಾರಣವೇ? ಇಲ್ಲವೇ ಬಸ್ನ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆಯೇ? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಬಸ್ ಮುಂಭಾಗ ಜಖಂಗೊಂಡಿದೆ. ಅವಘಡದಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

