ಕರ್ತವ್ಯ ಲೋಪದ ಆರೋಪ: ಹಾವೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮಾನತು

Share It

ಹಾವೇರಿ: ಕರ್ತವ್ಯ ಲೋಪದ ಆರೋಪದಲ್ಲಿ ಹಾವೇರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಸರಕಾರ ಆದೇಶಿಸಿದೆ.

ಮಳೆಯಿಂದ ಇಡೀ ತಾಲ್ಲೂಕಿನ ಜನತೆ ಸಂಕಷ್ಟದಲ್ಲಿದ್ದು, ಸಮರೋಪಾದಿಯಾಗಿ ತಾಲೂಕು ಆಡಳಿತ ಕೆಲಸ ಮಾಡಬೇಕಿತ್ತು. ಆದರೆ, ತಮ್ಮ ವರ್ಗಾವಣೆ‌ ಮತ್ತಿತರ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಭರತ್ ಹೆಗಡೆ, ಸರಕಾರದ ನೀತಿಗಳ ವಿರುದ್ಧ ನಡೆತೆ ತೋರಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಬಾಲಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಾವೇರಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಭರತ್ ಹೆಗಡೆ ಅವರನ್ನು ಆಡಳಿತಾತ್ಮಕ ಹಿತದೃಷ್ಠಿಯಿಂದ ದಾಂಡೇಲಿ ತಾಲೂಕು ಪಂಚಾಯತ್​ ಇಒ ಎಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಜು.30ರಂದು ಬಿಡುಗಡೆ ಮಾಡಲಾಗಿತ್ತು. ಅವರ ಹುದ್ದೆಗೆ ಸವಣೂರ ತಾ.ಪಂ ಇಒ ನವೀನ ಪ್ರಸಾದ ಅವರಿಗೆ ಹೆಚ್ಚುವರಿ ಪ್ರಭಾರದ ಜವಾಬ್ದಾರಿ ನೀಡಿ ಆದೇಶಿಸಲಾಗಿತ್ತು.

ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ಭರತ್ ಹೆಗಡೆ ತಮ್ಮ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದು ಇದರ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರದೇ ಆ.1ರಂದು ಮತ್ತೆ ಹಾವೇರಿ ತಾ.ಪಂ ಇಒ ಹುದ್ದೆಗೆ ಸ್ವಯಂ ವರದಿ ಮಾಡಿಕೊಂಡಿದ್ದರು.

ಜಿಲ್ಲೆಯಲ್ಲಿ ಮಳೆಯಿಂದ ವಿವಿಧ ಹಾನಿ ಮತ್ತು ಸಮಸ್ಯೆಗಳು, ಪ್ರಕೃತಿ ವಿಕೋಪ ಸಂಭವಿಸಿದಾಗ್ಯೂ ಕೇಂದ್ರಸ್ಥಾನದಲ್ಲಿ ಇರದೇ ಇರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ವಿಷಾಧ ವ್ಯಕ್ತಪಡಿಸಿದ್ದರು. 2023ರ ನವೆಂಬರ್ 7ರಂದು ನಡೆದ ಕೆಡಿಪಿ ಸಭೆಗೂ ಪೂರ್ವಾನುಮತಿ ಇಲ್ಲದೇ ಗೈರಾಗಿದ್ದು, ಇದಕ್ಕೆ ಕಾರಣ ಕೇಳಿ ನೋಟಿಸ್​ ನೀಡಿದಾಗ್ಯೂ, ಉತ್ತರ ನೀಡಿರಲಿಲ್ಲ.

ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಬೇಜವಾಬ್ದಾರಿ ವರ್ತನೆ, ಸರ್ಕಾರಿ ನೌಕರರಿಗೆ ತರವಲ್ಲದ ದುರ್ನಡತೆ ತೋರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.


Share It

You May Have Missed

You cannot copy content of this page