ನವದೆಹಲಿ: ಉಕ್ಕು ಸಚಿವಾಲಯದ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂಸತ್ತಿನಲ್ಲಿ ಕೇಂದ್ರದ ಹಣಕಾಸು ಸಚಿವರ ಕಚೇರಿಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಪ್ರಮುಖ ಅಭಿವೃದ್ಧಿ ಆದ್ಯತೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದರು.
ಉಕ್ಕು ಸಚಿವಾಲಯದ ಹೊಸ ಹೂಡಿಕೆಗಳು ಮತ್ತು ಈಗಾಗಲೇ ನಡೆಯುತ್ತಿರುವ ಯೋಜನೆಗಳ ಬಗ್ಗೆ ಹಾಗೂ ಉಕ್ಕು ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾನ್ಯ ಸಚಿವರ ಜತೆ ಸಮಾಲೋಚನೆ ನಡೆಸಲಾಯಿತು ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಸುಸ್ಥಿರ ಬೆಳವಣಿಗೆ ಉತ್ತೇಜಿಸುವ ಮತ್ತು ವಿಕಸಿತ ಭಾರತ-2047 ದೃಷ್ಟಿಕೋನವನ್ನು ಮುನ್ನಡೆಸುವ ಭವಿಷ್ಯತ್ತಿನ ಕೇಂದ್ರದ ಆಯವ್ಯಯ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ ಎಂದು ಸಚಿವರು ಹೇಳಿದ್ದಾರೆ.

