ಉಪಯುಕ್ತ ಸುದ್ದಿ

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Share It

ಮಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮುಂದಿನ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮುಂದಿನ ಐದು ದಿನಗಳ ಕಾಲ ಮಳೆಯ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದೂ ಸೇರಿ ನಾಲ್ಕು ದಿನ ಆರೆಂಜ್ ಅಲರ್ಟ್ ಮತ್ತು ಜುಲೈ ೮ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಲೆನಾಡು ಜಿಲ್ಲೆಗಳಲ್ಲಿಯೂ ಮಳೆಯ ಆರ್ಭಟವಿದ್ದು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಜುಲೈ ೬, ೭ರಂದು ಆರೆಂಜ್, ನಾಳೆ ಮತ್ತು ಜುಲೈ ೮ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕೊಡಗು ಜಿಲ್ಲೆಗೆ ಮೂರು ದಿನ ಮತ್ತು ಜುಲೈ ೮ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್ : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗಲಿದ್ದು, ಗಾಳಿ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿ. ಮೀ. ಇರಲಿದೆ. ಕೊಡಗು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ: ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ನಿನ್ನೆಯಿಂದ ಅತ್ಯಧಿಕ ಮಳೆ (೨೫ ಸೆ.ಮೀ) ಬಿದ್ದಿದೆ. ಉಳಿದಂತೆ, ಅತಿ ಹೆಚ್ಚು ಮಳೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ ೨೪ ಸೆ.ಮೀ, ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ ೨೩ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲಿ ೨೦ ಸೆ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಶಾಲೆ- ಪಿಯುಸಿ ಕಾಲೇಜಿಗಳಿಗೆ ಶುಕ್ರವಾರ ರಜೆ: ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ಜು.5 (ಶುಕ್ರವಾರ) ದಂದು ರಜೆ ಘೋಷಣೆ ಮಾಡಲಾಗಿದೆ. ಕಳೆದ ಕಾಲ ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಈ ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.


Share It

You cannot copy content of this page