ಸುದ್ದಿ

ಹೆಬ್ಬಾಳ: 50 ಸಾವಿರ ಇ-ಖಾತಾ ವಿತರಣೆ ಗುರಿ

Share It

• ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿಕೆ
• ಎರಡು ದಿನಗಳ ಇ-ಖಾತಾ ಸಂಭ್ರಮಕ್ಕೆ ಚಾಲನೆ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಆಸ್ತಿಗಳಿಗೆ ಇ-ಖಾತಾ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ತಿಳಿಸಿದ್ದಾರೆ.

ಹೆಬ್ಬಾಳದ ಎಚ್.ಎಂ.ಟಿ ಮೈದಾನದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ಇ-ಖಾತಾ ಸಂಭ್ರಮವನ್ನು ಉದ್ಘಾಟಿಸಿ, ಸಾಂಕೇತಿಕವಾಗಿ ಕೆಲವು ನಾಗರಿಕರಿಗೆ ಇ-ಖಾತೆಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರು ತಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಅಧಿಕೃತ ದಾಖಲೆಯಾಗಿ ಇ-ಖಾತೆಯನ್ನು ನೀಡಲಾಗುತ್ತಿದೆ. ಇದು ಸರ್ಕಾರದ ಪ್ರಮುಖ ಮತ್ತು ಕನಸಿನ ಯೋಜನೆಯಾಗಿದ್ದು, ಪ್ರತಿಯೊಂದು ಆಸ್ತಿಯ ಮಾಲೀಕರೂ ಈ ದಾಖಲೆಯನ್ನು ಹೊಂದಲು ಸದಾವಕಾಶವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ಮತ್ತು ಶಾಸಕರೆಲ್ಲರೂ ಸೇರಿ ನಾಗರಿಕರ ಮನೆ ಬಾಗಿಲಿಗೆ ಇ-ಖಾತೆಯನ್ನು ನೀಡಬೇಕೆಂಬ ಉದ್ದೇಶದಿಂದ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯಾದ್ಯಂತ 55 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತೆಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದ್ದು, ಪ್ರತಿಯೊಬ್ಬ ನಾಗರಿಕರು ತಮ್ಮ ಆಸ್ತಿಗಳಿಗೆ ಇ-ಖಾತೆಯನ್ನು ಪಡೆಯುವ ಮೂಲಕ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಹೆಬ್ಬಾಳ ಕ್ಷೇತ್ರದಲ್ಲಿ 50,000 ಕ್ಕೂ ಹೆಚ್ಚು ಸ್ವತ್ತುಗಳ ಪೈಕಿ ಈಗಾಗಲೇ 13,000 ಆಸ್ತಿಗಳಿಗೆ ಇ-ಖಾತೆಗಳನ್ನು ನೀಡಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು ನಾಲ್ಕು ಸಾವಿರ ಇ-ಖಾತೆಗಳು ವಿತರಣೆಯಾಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ನಾಗರಿಕರು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ತಮ್ಮ ಆಸ್ತಿಗಳಿಗೆ ಇ-ಖಾತೆ ಪಡೆಯಬಹುದಾಗಿದೆ ಎಂದರು.

ಯುಎಎಸ್ ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಹೆಬ್ಬಾಳ ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ 200 ಕೋಟಿ ರೂಪಾಯಿ ಅನುದಾನಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕೃಷಿ ವಿಶ್ವ ವಿದ್ಯಾಲಯದ ಬಳಿ ಈ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮುಂದಿನ ಆರು ತಿಂಗಳಲ್ಲಿ ಕ್ಷೇತ್ರದಲ್ಲಿ 22 ಸಾವಿರಕ್ಕೂ ಅಧಿಕ ಎಲ್ಇಡಿ ಲೈಟ್ ಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಬಿಬಿಎಂಪಿ ಪೂರ್ವ ವಲಯದ ಆಯುಕ್ತರಾದ ಸ್ನೇಹಲ್.ಆರ್ ಸೇರಿ ಬಿಬಿಎಂಪಿ ಅಧಿಕಾರಿಗಳು, ಮಾಜಿ ಪಾಲಿಕೆ ಸದಸ್ಯರುಗಳು, ಸ್ಥಳೀಯ ಹಿರಿಯ ಮುಖಂಡರು ಉಪಸ್ಥಿತರಿದ್ದರು.


Share It

You cannot copy content of this page