ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ರೇವ್ ಪಾರ್ಟಿ ಮೇಲಿನ ದಾಳಿ ಪ್ರಕರಣದಲ್ಲಿ ಸಿಸಿಬಿ ನೊಟೀಸ್ ಕೊಟ್ಟರೂ ವಿಚಾರಣೆಗೆ ಬರದೆ ನಟಿ ಹೇಮಾ ಕಳ್ಳಾಟ ಆಡುತ್ತಿದ್ದಾರೆ ಎನ್ನಲಾಗಿದೆ.
ಮೇ ೨೪ ರಂದು ಜಿ.ಆರ್. ಫಾರ್ಮ್ ಹೌಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಡ್ರಗ್ಸ್ ಸೇರಿದಂತೆ ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು, ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಸ್ಯಾಂಪಲ್ನಲ್ಲಿ ಮಾಧಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಸೇರಿ ಅನೇಕರಿಗೆ ಸಿಸಿಬಿ ನೊಟೀಸ್ ನೀಡಿತ್ತು. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ನೊಟೀಸ್ಗೆ ಕ್ಯಾರೆ ಎನ್ನದ ಹೇಮಾ ಮತ್ತು ಎಂಟು ಜನರು ವಿಚಾರಣೆಗೆ ಹಾಜರಾಗಿಲ್ಲ. ಅವರಿಗೆ ಮತ್ತೇ ನೊಟೀಸ್ ನೀಡಿರುವ ಸಿಸಿಬಿ, ಬಂಧನಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ತಮಗೆ ನೊಟೀಸ್ ಬರುತ್ತಿದ್ದಂತೆ ತಾವು ಹೈದರಾಬಾದ್ ನಲ್ಲಿಯೇ ಇರುವುದಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಹೇಮಾ, ಕೆಲ ರಾಜಕಾರಣಿಗಳ ಕಡೆಯಿಂದ ಸಿಸಿಬಿ ಪೊಲೀಸರಿಗೆ ಒತ್ತಡ ಹಾಕಿಸುವ ಕೆಲಸ ಮಾಡಿದ್ದರು ಎನ್ನಲಾಗಿದೆ. ಆದರೆ, ಸಿಸಿಬಿ ಬಗ್ಗದೆ ಮತ್ತೊಂದು ನೊಟೀಸ್ ನೀಡಿದ್ದು, ಹಾಜರಾಗದಿದ್ದರೆ ಬಂಧನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
