ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಹೈಕಮಾಂಡ್ ಸಭೆ: ರಿಪೋರ್ಟ್ ಕಾರ್ಡ್ ಜತೆ ಬಂದ ಸಚಿವರು
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ಪುನಾರಚನೆಗೆ ಮನಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ.
ದೆಹಲಿಗೆ ತೆರಳಿದ್ದ ವೇಳೆ ಸಿಎಂ ಮತ್ತು ಡಿಸಿಎಂ ಹೈಕಮಾಂಡ್‌ಗೆ ಸಚಿವರ ಬದಲಾವಣೆಯ ಸುದ್ದಿಯನ್ನು ಮುಟ್ಟಿಸಿ ಬಂದಿದ್ದರು. ಇದೀಗ ರಾಜ್ಯಕ್ಕೆ ಹೈಕಮಾಂಡ್‌ನಿಂದ ರಾಜ್ಯ ಉಸ್ತುವಾರಿಗಳ ಆಗಮನವಾಗಿದ್ದು, ಸಂಜೆ ಸಭೆ ನಡೆಯಲಿದೆ. ಸಭೆಯಲ್ಲಿ ಅಂತಿಮವಾಗಿ ಸಂಪುಟ ಪುನಾರಚನೆಯ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಆಗಮಿಸಿದ್ದು, ಸಿಎಂ, ಡಿಸಿಎಂ ಸೇರಿ ಹಿರಿಯ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯಲ್ಲಿ ಯಾರನ್ನು ಸಂಪುಟ ದಿಂದ ಕೈಬಿಡಬೇಕು ಮತ್ತು ಯಾರಿಗೆ ಸ್ಥಾನ ನೀಡಬೇಕು ಎಂಬ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ 10 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದವರು, ಇಲಾಖೆಯ ಮೇಲೆ ಹಿಡಿತವಿಲ್ಲದೆ ಇರುವವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಚಿವರ ಮೌಲ್ಯಮಾಪನ ಕೂಡ ನಡೆಯಲಿದ್ದು, ತಮ್ಮ ಒಂದು ವರ್ಷದ ಸಾಧನೆ ಜತೆಗೆ ಎಲ್ಲ ಸಚಿವರು ಹಾಜರಾಗಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಾನಕ್ಕೆ ಅಜಯ್ ಸಿಂಗ್, ಬಿ.ನಾಗೇಂದ್ರ ಸ್ಥಾನಕ್ಕೆ ಎನ್.ವೈ ಗೋಪಾಲಕೃಷ್ಣ, ಕೆ.ವೆಂಕಟೇಶ್ ಜಾಗಕ್ಕೆ ಶಿವಲಿಂಗೇಗೌಡ, ರಹೀಂ ಖಾನ್ ಜಾಗಕ್ಕೆ ಸಲೀಂ ಅಹಮದ್, ಮಧು ಬಂಗಾರಪ್ಪ ಜಾಗಕ್ಕೆ ಬೇಳೂರು ಗೋಪಾಲಕೃಷ್ಣ ಸೇರಿ 10 ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ.


