ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್ ತಂದಿದ್ದ ಆರೋಪದಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬರಿಗೆ ಎರಡು ಅವಧಿಯ ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಮಂಡಳಿ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಅಲ್ಲದೆ, ಮೊಬೈಲ್ ಫೋನ್ ಸಂವಹನಕ್ಕಾಗಿ ಬಳಸುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ಪರೀಕ್ಷಾ ಸಮಯದಲ್ಲಿ ಅಭ್ಯರ್ಥಿಯ ಬಳಿ ಫೋನ್ ಇದ್ದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಗಳನ್ನು ಹಾಳು ಮಾಡುವ ಅಪಾಯವಿರಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಯ ಪರೀಕ್ಷೆಗಳನ್ನು ರದ್ದುಪಡಿಸಿದ್ದ ಕ್ರಮವನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ಸಿಬಿಎಸ್ಇ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸಿಬಿಎಸ್ಇ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಮೊಬೈಲ್ ಫೋನ್ ಅನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬಹುದಾಗಿ ತಿಳಿಸಲಾಗಿದೆ ಎಂದು ಪೀಠ ಹೇಳಿದೆ.
ಪರೀಕ್ಷೆ ವೇಳೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿರುವ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಮಾರ್ಪಡಿಸಲು ಪರೀಕ್ಷಾ ಸಮಿತಿ ನೀಡಿದ್ದ ಶಿಪಾರಸನ್ನು 2224ರ ಜೂನ್ 24ರಂದು ನಡೆಸಿದ್ದ 139ನೇ ಸಭೆಯಲ್ಲಿ ಸಿಬಿಎಸ್ಇ ಅನುಮೋದಿಸಿದೆ.
ಈ ಹಿಂದೆ ಇದ್ದಂತಹ ಮಾರ್ಗಸೂಚಿಗಳ ಪ್ರಕಾರ ಮೊಬೈಲ್ ಫೋನ್ ತರುವುದು ಮತ್ತು ನಕಲು ಮಾಡುವವರನ್ನು ಸೌಮ್ಯ ದೃಷ್ಠಿಕೋನದಿಂದ ನೋಡುವ ವರ್ಗ 1ರಲ್ಲಿ ಪರಿಗಣಿಸಲಾಗಿತ್ತು. ಆದರೆ, ತಿದ್ದುಪಡಿ ಮಾರ್ಗಸೂಚಿಗಳ ಪ್ರಕಾರ ಈ ಆರೋಪವನ್ನು ವರ್ಗ 3 ಅಡಿಯಲ್ಲಿ ಸೇರಿಸಲಾಗಿದ್ದು, ಕಠಿಣ ಶಿಕ್ಷೆ ವಿಧಿಸಬಹುದಾಗಿದೆ.
ಆದ್ದರಿಂದ ಸಿಬಿಎಸ್ಇಯ ಈ ಪ್ರಕ್ರಿಯೆಯಲ್ಲಿ ನ್ಯಾಯಪೀಠ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಆದ್ದರಿಂದ, ಸಿಬಿಎಸ್ಇ ಸಲ್ಲಿಸಿರುವ ಮೇಲ್ಮನವಿಯನ್ನು ಪುರಸ್ಕರಿಸುತ್ತಿದ್ದು, ವಿದ್ಯಾರ್ಥಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಎತ್ತಿಹಿಡಿದು ಹೈಕೋರ್ಟ್ ಆದೇಶಿಸಿದೆ.

