ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟ ದರ್ಶನ್ ಗೆ ಜುಲೈ 18 ರವರೆಗಂತೂ ಜೈಲೂಟವೇ ಫಿಕ್ಸ್. ಕಾರಣ ಹೈಕೋರ್ಟ್ ದರ್ಶನ್ ಅವರ ಮನೆಯೂಟದ ಬೇಡಿಕೆಯ ವಿಚಾರಣೆಯನ್ನು ಜುಲೈ18 ಕ್ಕೆ ಮುಂದೂಡಿದೆ.
ಸದಾ ಪಾರ್ಟಿ, ಚಿಕನ್, ಮಟನ್, ವರ್ಕೌಟ್ ಎಂದು ಶೋಕಿ ಮಾಡುತ್ತಿದ್ದ ದರ್ಶನ್ ಗೆ ಜೈಲೂಟ ಸೆಟ್ ಆಗ್ತಿಲ್ಲ. ಫುಡ್ ಪಾಯ್ಸನ್ ಆಗಿದೆ, ಹೀಗಾಗಿ ಮನೆಯೂಟ ಕೊಡಲು ಅನುಮತಿ ಕೊಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಮನೆಯೂಟ ಕೊಡುವುದಕ್ಕೆ ಈ ಹಿಂದೆ ಅನುಮತಿ ನೀಡಿದ ಯಾವುದಾದರೂ ತೀರ್ಪು ಇದೆಯಾ? ಜೈಲಿನ ನಿಯಮಾವಳಿ ಏನೇಳುತ್ತೆ? ಈ ಬಗ್ಗೆ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದೀರಾ? ಅವರು ತಿರಸ್ಕಾರ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿತು.
ಇದಕ್ಕೆ ಇಲ್ಲ ಎಂಬ ಉತ್ತರ ನೀಡಿದ ದರ್ಶನ್ ಪರ ವಕೀಲರಿಗೆ ಯಾವುದೇ ಮನವಿ ಮಾಡದೆ, ಕೆಳಹಂತದ ನ್ಯಾಯಾಲಯಕ್ಕೂ ಮನವಿ ಮಾಡದೆ, ಮನವಿಯನ್ನು ಯಾರೂ ತಿರಸ್ಕಾರ ಮಾಡದೇ ನೇರವಾಗಿ ಹೈಕೋರ್ಟ್ ಗೆ ಸಲ್ಲಿಕೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ನಂತರ, ವಕೀಲರು ಹೇಳಿದ ಕೆಲ ಸಮಜಾಯಿಷಿ ಗಳನ್ನು ಆಲಿಸಿದ ನ್ಯಾಯಾಧೀಶರು ಅರ್ಜಿಯ ಮುಂದಿನ ವಿಚಾರಣೆ ಹಾಗೂ ತೀರ್ಪನ್ನು ಜುಲೈ18 ಕ್ಕೆ ಮುಂದೂಡಿ ಆದೇಶಿಸಿದರು. ಮನೆಯಿಂದ ಊಟ, ಹಾಸಿಗೆ ದಿಂಬು ಮತ್ತು ಕೆಲ ಪುಸ್ತಕಗಳನ್ನು ನೀಡಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಗೆ ರಿಟ್ ಸಲ್ಲಿಸಲಾಗಿತ್ತು.