ಸಕಲೇಶಪುರ: ಸಕಲೇಶಪುರ ಬಳಿ ರೈಲ್ವೇ ಹಳಿ ಮೇಲೆ ಗುಡ್ಡ ಕುಸಿದಿದ್ದು, ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲ್ವೇ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಈ ನಡುವೆ ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದ ನಾಲ್ಕು ರೈಲುಗಳು ಮತ್ತು ಮಂಗಳೂರು ಕಡೆಯಿಂದ ಬರುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕರು ಗಂಟೆಗಟ್ಟಲೇ ಪರದಡುವಂತಾಗಿದೆ. ಸಕಲೇಶಪುರ ರೈಲ್ವೇ ನಿಲ್ದಾಣದಿಂದ ಸುಮಾರು 1 ಕಿ.ಮೀ. ದೂರದ 40/200-400 ಮೈಲುಗಲ್ಲಿನ ಬಳಿ ಹೇಮಾವತಿ ನದಿಯ ಬ್ರಿಡ್ಜ್ ಸಮೀಪ ಘಟನೆ ನಡೆದಿದೆ.
ಮಂಗಳೂರಿನಿಂದ ಬರುತ್ತಿದ್ದ ರೈಲೊಂದು ಸ್ಥಳದಲ್ಲಿಯೇ ನಿಂತಿದ್ದು, ಅಲ್ಲಿಂದ ತೆರಳು ರೈಲ್ವೇ ಅಧಿಕಾರಿಗಳು ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೇ ಸಿಬ್ಬಂದಿ ನಡೆಸುತ್ತಿದ್ದು, ಶೀಘ್ರವೇ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದಾರೆ.
ನಿಲ್ದಾಣದಲ್ಲೇ ನಿಂತ ರೈಲುಗಳು: ಈ ನಡುವೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಮೂರು ರೈಲುಗಳು, ನಿಲ್ದಾಣದಲ್ಲಿಯೇ ನಿಂತಿವೆ. ಬಾಳೇಪೇಟೆ ನಿಲ್ದಾಣದಲ್ಲಿ, ಆಲೂರು ಮತ್ತು ಹಾಸನ ನಿಲ್ದಾಣದಲ್ಲಿಯೇ ರೈಲುಗಳನ್ನು ತಡೆಹಿಡಿಯಲಾಗಿದೆ. ತುರ್ತು ತೆರಳುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.