ಹೈದರಾಬಾದ್: ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಮದುವೆಗೆ ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ ಡೈವೋರ್ಸ್ ಕೊಡಲು ಸಮಸ್ಯೆಯೇನಿಲ್ಲ, ಇದು ಎಸ್‌ಟಿ ಸಮುದಾಯದ ಮದುವೆಗೂ ಅನ್ವಯ ಎಂದು ಹೈದರಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮೈಲಾರಂ ತಾಂಡಾದ ಎಸ್‌ಟಿ ದಂಪತಿ 2019ರ ಮೇನಲ್ಲಿ ವಿವಾಹವಾಗಿದ್ದರು. ಇದಾದ ಒಂದೇ ವರ್ಷದಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಂತೆಯೇ, ಹಿರಿಯರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡು 2023ರಲ್ಲಿ ದಂಪತಿ ದೂರಾಗಿದ್ದರು. ಪತ್ನಿಗೆ ಪತಿ 9 ಲಕ್ಷ ರೂ.ಗಳನ್ನು ನೀಡಬೇಕು ಮತ್ತು ಆಭರಣಗಳು ಯಾರಿಗೆ ಸೇರಿದ್ದಾವೋ, ಅವರಿಗೆ ಮರಳಿಸಬೇಕೆಂದು ರಾಜೀ ಮಾಡಿಕೊಂಡಿದ್ದರು. ನಂತರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (ಬಿ) ಅಡಿ ಕಾಮರೆಡ್ಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ದಂಪತಿಯು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡದ ಪಂಗಡಕ್ಕೆ ಸೇರಿದ ಕಾರಣ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2) ಅಡಿಯಲ್ಲಿ ವಿಚ್ಛೇದನ ನೀಡಲು ಆಗುವುದಿಲ್ಲ ಎಂದು ನ್ಯಾಯಾಲಯವು ಅರ್ಜಿ ತಿರಸ್ಕರಿಸಿತ್ತು. ಈ ಸೆಕ್ಷನ್ 2(2) ಹಿಂದೂ ವಿವಾಹ ಕಾಯ್ದೆ ಎಸ್‌ಟಿಗಳಿಗೆ ಅನ್ವಯಿಸಬೇಕಾದರೆ, ಅಂತಹ ಪಂಗಡವು ಕೇಂದ್ರದ ಅಧಿಸೂಚನೆಗೆ ಒಳಪಡಬೇಕು ಎಂದು ಹೇಳುತ್ತಿದೆ.
ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಅಲಿಶೆಟ್ಟಿ ಲಕ್ಷ್ಮೀನಾರಾಯಣ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರವಾಗಿ ವಕೀಲ ಟಿ. ಸೃಜನಕುಮಾರ್ ರೆಡ್ಡಿ ಮತ್ತು ನ್ಯಾಯಾಲಯದ ಸಹಾಯಕ ಕೆ.ಪವನಕುಮಾರ್ ವಾದ ಮಂಡಿಸಿ, ವಿಚ್ಛೇದನ ಕೋರಿರುವ ದಂಪತಿ ಲಂಬಾಡಾ (ಲಂಬಾಣಿ) ಗುಂಪಿನ ಮೀನಾ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದ ವಿವಾಹವಾಗಿದ್ದಾರೆ. ಹಿಂದೂ ಕಾನೂನನ್ನು ದಂಪತಿಗೆ ಅನ್ವಯಿಸದಿದ್ದರೆ, ಮಹಿಳೆಗೆ ಅನ್ಯಾಯವಾಗುತ್ತದೆ. ಬಹುಪತ್ನಿತ್ವ ಆಚರಣೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದ್ದರು.
ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಗುರುತಿಸಲಾದ ಬುಡಕಟ್ಟುಗಳ ಸಂಪ್ರದಾಯ ಮತ್ತು ಸಂಪ್ರದಾಯ ರಕ್ಷಿಸಲು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2)ಅನ್ನು ಜಾರಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್, ದೆಹಲಿ ಮತ್ತು ಆಂಧ್ರಪ್ರದೇಶ ಹೈಕೋರ್ಟ್ಗಳು ಈ ಹಿಂದೆ ತೀರ್ಪು ನೀಡಿವೆ. ಈ ಪ್ರಕರಣದಲ್ಲೂ ಹಿಂದೂ ಸಂಪ್ರದಾಯದ ಮದುವೆ ನಡೆದಿದ್ದರಿಂದ ನ್ಯಾಯಾಲಯ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡುವಂತೆ ಆದೇಶಿಸಿದೆ. ಆಯಾ ಪ್ರಕರಣಗಳ ಸಂದರ್ಭಗಳನ್ನು ಆಧರಿಸಿ ಕೆಳ ನ್ಯಾಯಾಲಯಗಳು ಸಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
