ಬೆಂಗಳೂರು: ಗೃಹಸಚಿವ ಡಾ. ಜಿ. ಪರಮೇಶ್ವರ್ ಹುಟ್ಟುಹಬ್ಬ ಕಾರ್ಯಕ್ರಮದ ವೇಳೆ ತೆಂಗಿನ ಮರವೊಂದು ಉರುಳುಬಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಸದಾಶಿವನಗರದ ಗೃಹಸಚಿವ ಡಾ. ಪರಮೇಶ್ವರ್ ನಿವಾಸದಲ್ಲಿ ಅವರ ಜನ್ಮದಿನದ ಸಂಭ್ರಮಾಚರಣೆ ನಡೆಯುತ್ತಿತ್ತು. ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಜೋರಾಗಿ ಗಾಳಿ ಬೀಸಿದ್ದು, ತೆಂಗಿನ ಮರವೊಂದು ಮುರಿದುಬಿದ್ದಿದೆ.
ತೆಂಗಿನ ಮರ ಮುರಿದು ಬಿದ್ದ ರಭಸಕ್ಕೆ ಸಂಭ್ರಮಾಚರಣೆಗೆ ಹಾಕಿದ್ದ ಶಾಮಿಯಾನದ ಮೇಲೆ ಬಿದ್ದಿದೆ. ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯವಾಗದೇ, ಕಾರ್ಯಕರ್ತರು ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ಎರಡು ದಿನದಿಂದ ಮಳೆಯ ಆರ್ಭಟ ಜೋರಾಗಿದ್ದು, ಅನೇಕ ಮರಗಳು ಧರೆಗುರುಳಿವೆ. ಇಂದು ಸಂಜೆ ಸುರಿದ ಮಳೆಯಿಂದ ಸ್ವತಃ ಗೃಹಸಚಿವರ ಮನೆಯ ಮೇಲೆಯೇ ಮರ ಉರುಳಿಬಿದ್ದಿರುವುದು ಆತಂಕಕ್ಕೆ ಕಾರಣವಾಗಿತ್ತು.