ಹನಿಮೂನ್ ಬ್ರೇಕ್ ಮಾಡಿ ಆತ್ಮಹತ್ಯೆ ಪ್ರಕರಣ : ಪತ್ನಿ ಸಾವಿನ ನಂತರ ಪತಿಯೂ ಆತ್ಮಹತ್ಯೆ
ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣದಲ್ಲಿ ತಿರುವು ದೊರೆತಿದ್ದು, ಪತ್ನಿ ಸಾವನ್ನಪ್ಪಿದ ಬಳಿಕ, ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದ ಆಕೆಯ ಪತಿ ಸೂರಜ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಗಪುರದಲ್ಲಿ ಸೂರಜ್ ಸಾವಿಗೆ ಶರಣಾಗಿದ್ದು, ಅವರ ತಾಯಿ ಜಯಂತಿ ಸಹ ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದೆ. ಅಕ್ಟೋಬರ್ 29 ರಂದು ಗಾನವಿ ಹಾಗೂ ಸೂರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದ ದಂಪತಿ, ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾನುವಾರ ಮನೆಗೆ ವಾಪಸ್ಸಾಗಿದ್ದರು. ನಂತರ ಮನೆಯಲ್ಲಿ ಜಗಳವಾದ ಹಿನ್ನೆಲೆಯಲ್ಲಿ, ಗಾನವಿಯನ್ನು ಆಕೆಯ ಪೋಷಕರು ತವರು ಮನೆಗೆ ಕರೆತಂದಿದ್ದರು.
ಬುಧವಾರ ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಗಾನವಿಯನ್ನು ಪೋಷಕರು ರಕ್ಷಿಸಿ ರಾಮಮೂರ್ತಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು ಗಾನವಿ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿಸಿದ್ದರು. ವೆಂಟಿಲೇಟರ್‌ನಲ್ಲಿ ಇರಿಸಿದ್ದ ಗಾನವಿ ಚಿಕಿತ್ಸೆಗೆ ಸ್ಪಂದಿಸದೆ, ಗುರುವಾರ ರಾತ್ರಿ ಸಾವನ್ನಪಿದ್ದರು.
ಈ ಬಗ್ಗೆ ಸೂರಜ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಗಾನವಿ ಪೋಷಕರು ದೂರು ನೀಡಿದ್ದರು. ಘಟನೆ ಬೆನ್ನಲ್ಲೇ, ಸೂರಜ್, ಅವರ ತಾಯಿ ಜಯಂತಿ ಮತ್ತು ಸೂರಜ್ ಸಹೋದರ ಸಂಜಯ್ ನಾಗಪುರಕ್ಕೆ ತೆರಳಿದ್ದರು. ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಸೂರಜ್ ಸಾವನ್ನಪ್ಪಿದ್ದು, ಅವರ ತಾಯಿ ಜಯಂತಿಗೆ ನಾಗಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


