ಬೆಂಗಳೂರು: ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿದೆ ಗೊತ್ತಿದೆಯಾ ಎಂದು ಬಿಜೆಪಿ ರಾಜ್ಯ ನಾಯಕರನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ಎಂಬ ಮಹಾಮಾರಿಯ ವಿರುದ್ಧ ಮೊದಲು ಧ್ವನಿಯೆತ್ತಿದ್ದೆ ಕಾಂಗ್ರೆಸ್ ಪಕ್ಷ., ಮೋದಿ ಅವರು ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ಆದರೆ, ಹನ್ನೊಂದು ಮುಕ್ಕಾಲು ವರ್ಷದಲ್ಲಿ ಭರ್ತಿ ಮಾಡಿರುವುದು ಕೇವಲ 7 ಲಕ್ಷ ಹುದ್ದೆಗಳನ್ನಷ್ಟೆ. ಇನ್ನೂ 40 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ವರದಿ ತಿಳಿಸಿದೆ.
ಹೀಗಾಗಿ, ಬಿಜೆಪಿ ಪ್ರತಿಭಟನೆ ಮಾಡಬೇಕಿರುವುದು ರಾಜ್ಯ ಸರಕಾರದ ವಿರುದ್ಧವೋ ಅಥವಾ ಕೇಂದ್ರ ಸರಕಾರದ ವಿರುದ್ಧವೋ ಎಂಬ ಗೊಂದಲದಲ್ಲಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಸರಕಾರ ಸಾರಿಗೆ ಇಲಾಖೆಯೊಂದರಲ್ಲೇ ಕಳೆದ ಎರಡೂವರೆ ವರ್ಷಗಳಲ್ಲಿ 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದೆ. 1 ಸಾವಿರ ಅನುಕಂಪದ ಆಧಾರದ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ೨೦೧೯-೨೦೨೩ರ ಅವಧಿಯಲ್ಲಿ ನಿಮ್ಮ ಸರಕಾರ ಭರ್ತಿ ಮಾಡಿದ ಹುದ್ದೆಗಳೆಷ್ಟು ಎಂಬುದರ ಲೆಕ್ಕ ಕೊಡ್ತೀರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸಾರಿಗೆ ಇಲಾಖೆಯೊಂದರಲ್ಲೇ ನಿಮ್ಮ ಅವಧಿಯಲ್ಲಿ 13,900 ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ನಮ್ಮ ಅವಧಿಯಲ್ಲಿ ಹೊರಡಿಸಿದ್ದ ನೇಮಕಾರಿ ಅಧಿಸೂಚನೆಗಳನ್ನು 2019-2023 ರ ಅವಧಿಯಲ್ಲಿ ತಡೆಹಿಡಿಯಲಾಗಿತ್ತು. ಈ ಅವಧಿಯಲ್ಲಿ ಎಷ್ಟು ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಲೀಕ್, ಭ್ರಷ್ಟಾಚಾರ ನಡೆದಿದೆ ಎಂಬುದು ತಮಗೆ ತಿಳಿದಿದಿಯೇ ಎಂದು ಪ್ರಶಿಸಿದ್ದಾರೆ.
ಈಗಾಗಲೇ ಆರ್ಥಿಕ ಇಲಾಖೆ 60 ಸಾವಿರ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ. ಭಾರತದ ನಿರುದ್ಯೋಗ ಪ್ರಮಾಣ 4.8ರಿಂದ 5.0ಗೆ ಏರಿಕೆಯಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ 2.4ರಿಂದ 2.8 ರವರೆಗೆ ಇದೆ. ಕೇರಳ, ಬಿಹಾರ, ಆಂಧ್ರಪ್ರದೇಶ, ರಾಜಸ್ತಾನ ರಾಜ್ಯಗಳಲ್ಲಿಯೂ ನಮಗಿಂತ ಹೆಚ್ಚಿನ ನಿರುದ್ಯೋಗ ಪ್ರಮಾಣವಿದೆ ಎಂದು ನಿಮಗೆ ಗೊತ್ತಾ? ನಿಮಗೆ ಆತ್ಮವಲೋಕನ ಮಾಡಿಕೊಳ್ಳುವ ಮನಸ್ಸಿದ್ದರೆ ನೀವು ಇಂದು ವಿರೋಧ ಪಕ್ಷದ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಕುಟುಕಿದ್ದಾರೆ.

