ಸುದ್ದಿ

ಹುಬ್ಬಳ್ಳಿ: ಆರು ಲಕ್ಷ ರೂಪಾಯಿ ಲಂಚ; ವಾಣಿಜ್ಯ ತೆರಿಗೆ ಡಿಸಿ ಲೋಕಾಯುಕ್ತ ಬಲೆಗೆ

Share It

ಹುಬ್ಬಳ್ಳಿ: ವಾಣಿಜ್ಯ ತೆರಿಗೆ ಉಪ ಆಯುಕ್ತರೊಬ್ಬರು 6 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಭರತ್ ಕುಮಾರ್ ಹೆಗ್ಗಡೆ ಲೋಕಾ ಬಲೆಗೆ ಬಿದ್ದ ಅಧಿಕಾರಿ. ಸೋಮವಾರ ಅಂಕೋಲಾ ಮೂಲದ ವಿಶ್ವಜಿತ್ ನಾಯಕ್ ಎಂಬುವರಿಂದ 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಭರತ್‌ ಕುಮಾರ ಲೋಕಾ ಬಲೆಗೆ ಬಿದ್ದಿದ್ದಾರೆ. 2019 ರಲ್ಲಿ 8 ಟಿಪ್ಪರ್‌ ಖರೀದಿಸಿದ್ದ ವಿಶ್ವಜಿತ್‌ ನಾಯಕ್‌ ಅವರಿಗೆ ಇನ್ಪುಟ್‌ ಟ್ಯಾಕ್ಸ್​ ಕ್ರೆಡಿಟ್‌ 60 ಲಕ್ಷ ಬಂದಿತ್ತು. ಅದರಲ್ಲಿ 34 ಲಕ್ಷ ಇನ್ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ಪಡೆದುಕೊಂಡಿದ್ದರು.

ವಿಶ್ವಜಿತ್‌ ಪಡೆದುಕೊಂಡ ಇನ್ಪುಟ್‌ ಟ್ಯಾಕ್ಸ್ ಕಾನೂನು ಬಾಹಿರ ಎಂದು ದೂರು ದಾಖಲಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಅವರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾಗಿ ಕೇಸ್ ದಾಖಲಾಗಿತ್ತು. ನಾಲ್ಕು ಬಾರಿ ವಿಚಾರಣೆಗೆ ಕರೆದಿದ್ದರು. ಸೋಮವಾರ ಐದನೇ‌ ಬಾರಿಗೆ ವಿಚಾರಣೆ ಇತ್ತು. ವಿಚಾರಣೆಗೆ ಬರುವಾಗ ಹಣ ತೆಗೆದುಕೊಂಡು ಬನ್ನಿ, ಕೇಸ್ ಕ್ಲೋಸ್ ಮಾಡುತ್ತೇನೆ ಅಂತಾ ಹೇಳಿದ್ದರು ಎಂದು ವಿಶ್ವಜಿತ್ ಲೋಕಾಯುಕ್ತ ಅಧಿಕಾರಿಗಳಿಗೆ​ ದೂರು ನೀಡಿದ್ದರು.

ನಿನ್ನೆ 6 ಲಕ್ಷ ರೂಪಾಯಿ ನೀಡುವಾಗ ವಾಣಿಜ್ಯ ತೆರಿಗೆ ಉಪ ಆಯುಕ್ತರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್, ಲೋಕಾ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್, ಇನ್ಸ್​ಪೆಕ್ಟರ್​ ರಾಜು ನೇತೃತ್ವದ ತಂಡ ದಾಳಿ ಮಾಡಿದ್ದು, ತನಿಖೆ ಮುಂದುವರೆಸಿರಿವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page